ನವದೆಹಲಿ: ಸರ್ಕಾರ ಶೀಘ್ರದಲ್ಲಿಯೇ ಸಾರ್ವಜನಿಕ ಭವಿಷ್ಯನಿಧಿ(ಪಿಪಿಎಫ್), ಎನ್‌ಎಸ್‌ಸಿ, ಸುಕನ್ಯಾ ಸಮೃದ್ಧಿ, ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು, ಹಿರಿಯ ನಾಗರಿಕರ ಉಳಿತಾಯ ಖಾತೆ ಬಡ್ಡಿ ದರಗಳನ್ನು ಏರಿಸುವ ಸಾಧ್ಯತೆ ಇದೆ.
ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಸಣ್ಣ ಉಳಿತಾಯಗಾರರಿಗೆ ಸುರಕ್ಷಿತ ಆದಾಯದ ಮೂಲಗಳಾಗಿವೆ.
ಷೇರು ಮಾರುಕಟ್ಟೆಯಲ್ಲಿ ತೀವ್ರ ಏರಿಳಿತಗಳು ಸಂಭವಿಸುತ್ತಿರುವಾಗ ಹಿರಿಯ ನಾಗರಿಕರು ತಮ್ಮ ಉಳಿತಾಯದ ಹೂಡಿಕೆಯನ್ನು ಸುರಕ್ಷಿತ ಹಣಕಾಸು ಸಾಧನಗಳಲ್ಲಿ ಠೇವಣಿ ಇಡಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಜನಪ್ರಿಯವಾಗಿವೆ. ಇದರಲ್ಲಿ ಮಾಸಿಕ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಪಿಪಿಎಫ್ ಸೇರಿದೆ. ಇವುಗಳ ಬಡ್ಡಿ ದರಗಳನ್ನು ಸರ್ಕಾರ ಮೂರು ತಿಂಗಳೊಗೊಮ್ಮೆ ಪರಿಷ್ಕರಿಸುತ್ತದೆ. ಜೂನ್ ೩೦ಕ್ಕೆ ಇವುಗಳ ಬಡ್ಡಿ ದರಗಳು ಪರಿಷ್ಕರಣೆಯಾಗುವ ನಿರೀಕ್ಷೆ ಇದೆ. ಕಳೆದ ಕೆಲ ತ್ರೈಮಾಸಿಕಗಳಿಂದ ಸರ್ಕಾರ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿತ್ತು.
ಬಡ್ಡಿ ದರ ಏರಿಕೆ ಏಕೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿ ಹಣದುಬ್ಬರವನ್ನು ಹತ್ತಿಕ್ಕಲು ತನ್ನ ರೆಪೊದರದಲ್ಲಿ ಎರಡು ಹಂತಗಳಲ್ಲಿ ಒಟ್ಟು ೦.೯೦% ಏರಿಕೆ ಮಾಡಿದೆ. ಹೀಗಾಗಿ ಸಾಲಗಾರರು ಹೆಚ್ಚು ಹಣವನ್ನು ನೀಡಬೇಕಾಗುತ್ತದೆ. ಇದರ ಪರಿಣಾಮ ಹೂಡಿಕೆದಾರರ ಆದಾಯ ಹೆಚ್ಚಲಿದೆ. ಈಗಾಗಲೇ ಹಲವು ಬ್ಯಾಂಕ್‌ಗಳು ತಮ್ಮ ಠೇವಣಿಗಳ ಮೇಲಿನ ಬಡ್ಡಿ ದರ ಏರಿಸಿವೆ. ಹೀಗಾಗಿ ಸರ್ಕಾರ ಕೂಡ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಸುವ ಸಾಧ್ಯತೆ ಉಂಟಾಗಿದೆ.
ಪ್ರಸ್ತುತ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಇಂತಿವೆ
- ಸಾರ್ವಜನಿಕ ಭವಿಷ್ಯನಿಧಿ : 7.1%
- ರಾಷ್ಟ್ರೀಯ ಉಳಿತಾಯ ಯೋಜನೆ : 6.8%
- ಸುಕನ್ಯಾ ಸಮೃದ್ಧಿ ಯೋಜನೆ : 7.6%
- ಕಿಸಾನ್ ವಿಕಾಸ ಪತ್ರ : 6.9%
- ೫ ವರ್ಷ ಅವಧಿಯ, ಹಿರಿಯ ನಾಗರಿಕರ ಉಳಿತಾಯ ಯೋಜನೆ: 7.4%