ಇಸ್ಲಮಾಬಾದ್: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಅಕ್ಷರಶಃ ದರ ಸ್ಫೋಟ ಸಂಭವಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 272 ರೂ.ಗೆ ಹಾಗೂ ಡೀಸೆಲ್ 280 ರೂ.ಗೆ ಏರಿಕೆಯಾಗಿದೆ. (Pakistan Inflation) ಸೀಮೆ ಎಣ್ಣೆ ಲೀಟರ್‌ಗೆ 202 ರೂ.ಗೆ ವೃದ್ಧಿಸಿದೆ. ಹಾಲಿನ ದರ ಲೀಟರ್‌ಗೆ 210 ರೂ, ಕೋಳಿ ಮಾಂಸ ಪ್ರತಿ ಕೆಜಿಗೆ 780 ರೂ.ಗೆ ದುಬಾರಿಯಾಗಿದೆ.
ಈಗಾಗಲೇ ಅಗತ್ಯ ವಸ್ತುಗಳ ದರದಲ್ಲಿ ಏರಿಕೆಯ ಪರಿಣಾಮ ಕಂಗಾಲಾಗಿರುವ ಜನತೆ ಇದೀಗ ಮತ್ತಷ್ಟು ಚಿಂತಾಜನಕ ಪರಿಸ್ಥಿತಿ ಎದುರಿಸುವಂತಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಪಾಕ್ ಸರ್ಕಾರ 18%ಕ್ಕೆ ಏರಿಸಲು ಉದ್ದೇಶಿಸಿದೆ. ತೈಲ ದರ ಏರಿಕೆಯಿಂದ ಸರ್ಕಾರಕ್ಕೆ ತೆರಿಗೆ ಸಂಗ್ರಹ ಹೆಚ್ಚಿಸಲು ನೆರವಾಗಲಿದೆ.
ಜಿಯೊ ಟಿವಿ ಪ್ರಕಾರ ಪಾಕಿಸ್ತಾನದಲ್ಲಿ ಸೀಮೆ ಎಣ್ಣೆ ದರ ಲೀಟರ್‌ಗೆ 202 ರೂ.ಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ನ ಷರತ್ತುಗಳಿಂದಾಗಿ ಪಾಕಿಸ್ತಾನ ತೆರಿಗೆಗಳನ್ನು ಏರಿಸಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಷರತ್ತುಗಳಿಗೆ ಒಪ್ಪಿದರೆ ಮಾತ್ರ ಮುಂದಿನ ಹಂತದಲ್ಲಿ ಹಣಕಾಸು ನೆರವು ನೀಡುವುದಾಗಿ ಐಎಂಎಫ್ ಒತ್ತಡ ಹೇರಿದೆ. ಐಎಂಎಫ್ ನೆರವು ನೀಡಿದರೂ, ಪಾಕಿಸ್ತಾನದ ಆರ್ಥಿಕತೆ ಹಳಿಗೆ ಮರಳುವುದು ಕಷ್ಟ. ಸದೃಢ ಆರ್ಥಿಕ ನಿರ್ವಹಣೆ ಈಗ ಎಲ್ಲಕ್ಕಿಂತ ಮುಖ್ಯ ಎಂದು ತಜ್ಞರು ಹೇಳಿದ್ದಾರೆ. ಪಾಕಿಸ್ತಾನ ಕೇವಲ ಮೂರು ವಾರಗಳ ಆಮದಿಗೆ ಅವಧಿಗೆ ಸಾಕಾಗುವಷ್ಟು ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ.