ನವದೆಹಲಿ: ದೇಶದ ಟೆಲಿಕಾಂ ಕಂಪನಿಗಳು ಕೆಲ ದಿನಗಳ ಹಿಂದೆ ಗ್ರಾಹಕರಿಗೆ ಬೆಲೆಯೇರಿಕೆಯ ಬಿಸಿ ಮುಟ್ಟಿಸಿವೆ (Price Hike). ರಿಲಯನ್ಸ್ ಜಿಯೋ (Reliance Jio), ಏರ್‌ಟೆಲ್ (Airtel), ವೋಡಾಫೋನ್ ಐಡಿಯಾ (Vodafone Idea) ಮುಂತಾದ ಕಂಪನಿಗಳು ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಬೆಲೆಗಳನ್ನು ಏರಿಕೆ ಮಾಡಿವೆ. ಇದೀಗ ಮೊಬೈಲ್ ಕಂಪನಿಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದು ಸಾಧ್ಯವೆ? ಈ ಕುರಿತಾದ ನಿಯಮ ಏನು ಹೇಳುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಸರ್ಕಾರ ಮತ್ತು ಟೆಲಿಕಾಂ ನಿಯಂತ್ರಕ ಸಂಸ್ಥೆ ಟೆಲಿಕಾಂ ಕಂಪನಿಗಳ ಬೆಲೆ ಹೆಚ್ಚಳವನ್ನು ತಡೆಯುವುದಿಲ್ಲ ಮತ್ತು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ʼʼಹಾಗೆ ನೋಡಿದರೆ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿನ ದರ ಇನ್ನೂ ಅಗ್ಗವಾಗಿದೆ. ಕಂಪನಿಗಳು ಸೇವೆಗಳ ಗುಣಮಟ್ಟದ ಸೇವೆ ನೀಡಲು ತಮ್ಮ ಗಮನವನ್ನು ಹರಿಸಬೇಕುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಟೆಲಿಕಾಂ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಇದೀಗ ಸರ್ಕಾರ ಮಧ್ಯಪ್ರವೇಶಿಸುವಷ್ಟು ಪರಿಸ್ಥಿತಿ ಗಂಭೀರವಾಗಿಲ್ಲ. ಸುಮಾರು ಮೂರು ವರ್ಷಗಳ ನಂತರ ಸ್ವಲ್ಪ ಮಟ್ಟಿನ ಬೆಲೆ ಏರಿಕೆಯಾಗಿದೆಯಷ್ಟೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಲೆ ಏರಿಕೆಯ ಬಿಸಿ
ಈ ವಾರ ಭಾರತದ ಮೂರು ಪ್ರಮುಖ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್ ಐಡಿಯಾ ಮೊಬೈಲ್ ರೀಚಾರ್ಜ್ ದರವನ್ನು ಶೇ. 11-25ರಷ್ಟು ಹೆಚ್ಚಿಸಿವೆ. ʼʼಮೊಬೈಲ್ ರೀಚಾರ್ಜ್ ದರದಲ್ಲಿನ ಶೇ. 13 ಹೆಚ್ಚಳವು ತೀರಾ ಹೊರೆ ಎನಿಸಿಕೊಂಡಿಲ್ಲ. ದರ ಹೆಚ್ಚಳ ಮಧ್ಯಮವಾಗಿದೆ. ಇದು ಮನೆಯ ವೆಚ್ಚದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲʼʼ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (Trai) ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, “ಟೆಲಿಕಾಂ ಕಂಪನಿಗಳು ದರ ನಿರ್ಧರಿಸುವ ವಿಚಾರದಲ್ಲಿ ಸ್ವತಂತ್ರರಾಗಿದ್ದಾರೆ. ಅವರ ನಿರ್ಧಾರದಲ್ಲಿ ನಾವು ಮಧ್ಯ ಪ್ರವೇಸಿಸುವುದಿಲ್ಲ. ಆದರೆ ಅವರು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಬೇಕು. ಗುಣಮಟ್ಟದಲ್ಲಿ ರಾಜಿಯಾದರೆ ನಾವು ಮಧ್ಯಪ್ರವೇಶಿಸುತ್ತೇವೆʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Vodafone Idea: ಜಿಯೋ, ಏರ್‌ಟೆಲ್ ಬೆನ್ನಲ್ಲೇ ವೋಡಾಫೋನ್ ಐಡಿಯಾ ಪ್ಲಾನ್ ಬೆಲೆ ಏರಿಕೆ; ಹೀಗಿದೆ ವಿವರ
ಮೊಬೈಲ್ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್ ಸೂಕ್ತ?
ಬೆಂಗಳೂರು: ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಹಾಗೂ ವಿ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯಲ್ಲಿ (ಟಾರೀಫ್ ದರಪಟ್ಟಿಯನ್ನು) ಹೆಚ್ಚಳ ಮಾಡಿವೆ. ಮೂರು ಟೆಲಿಕಾಂಗಳ ಬೆಲೆ ಏರಿಕೆ ಕಂಡ ಯೋಜನೆಗಳ ಹೊಸ ದರಗಳನ್ನು ಹೋಲಿಸಿ ನೋಡಿದರೆ ನಮ್ಮ ಕಂಪನಿಯ ದರವೇ ಕಡಿಮೆ ಎಂದು ರಿಲಯನ್ಸ್ ಜಿಯೋ ಟೆಲಿಕಾಂ ಹೇಳಿಕೊಂಡಿದೆ.
ಜಿಯೋ ಸೇರಿದಂತೆ ಏರ್‌ಟೆಲ್ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿವೆ. ಅದಾಗ್ಯೂ ಜಿಯೋದ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ. ಹಾಗೆಯೇ ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಪೋಸ್ಟ್‌ಪೇಯ್ಡ್ ಯೋಜನೆಯು ಹತ್ತಿರದ ಪ್ರತಿಸ್ಪರ್ಧಿಯ ಪೋಸ್ಟ್ ಪೇಯ್ಡ್ ಪ್ಲಾನ್‌ಗಿಂತ ಶೇ. 29ರಷ್ಟು ಕಡಿಮೆಯಾಗಿದೆ ಎಂದು ಈ ಕಂಪನಿ ಹೇಳಿದೆ.