ನವ ದೆಹಲಿ: ಭಾರತವು ಹಸಿರು ಇಂಧನ (Green energy) ಉತ್ಪಾದನೆಗೆ ಆದ್ಯತೆ ನೀಡುತ್ತಿದೆ. 2023-24ರಲ್ಲಿ ಭಾರತವು ಹಸಿರು ಇಂಧನ ವಲಯದಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು (Green energy investment) ಬಜೆಟ್ ವೇದಿಕೆಯನ್ನು ಸಿದ್ಧಪಡಿಸಿದೆ. ಸೌರ ವಿದ್ಯುತ್, ಪವನ ವಿದ್ಯುತ್, ಜೈವಿಕ ಇಂಧನ ಕ್ಷೇತ್ರವನ್ನು ಒಳಗೊಂಡಿರುವ ಹಸಿರು ಇಂಧನ ಎಂದರೆ ಚಿನ್ನದ ಗಣಿಗೆ ಸಮಾನವಾಗಿದ್ದು, ಇಲ್ಲಿ ಹೇರಳ ಅವಕಾಶಗಳು ಇವೆ ಎಂದು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಮೋದಿ ಆಹ್ವಾನ ನೀಡಿದ್ದಾರೆ.
ಬಜೆಟ್ 2023-24 ಕುರಿತ ವೆಬಿನಾರ್‌ನಲ್ಲಿ ಗುರುವಾರ ಮಾತನಾಡಿದ ಪ್ರಧಾನಿ ಮೋದಿ, ಭಾರತವು 10% ಎಥೆನಾಲ್ ಮಿಶ್ರಣದ ಗುರಿಯನ್ನು ನಿಗದಿತ ಅವಧಿಗಿಂತ ಐದು ತಿಂಗಳು ಮೊದಲೇ ಈಡೇರಿಸಿದೆ. 40% ಎಥೆನಾಲ್ ಮಿಶ್ರಣದ ಗುರಿಯನ್ನು ಗಡುವುಗಿಂತ 9 ವರ್ಷ ಮೊದಲೇ ಮಾಡಬಹುದು ಎಂದರು.
2014ರಿಂದೀಚೆಗೆ ಬಜೆಟ್ ಕೇವಲ ಸಮಕಾಲೀನ ಸವಾಲುಗಳನ್ನು ಬಗೆಹರಿಸಿಲ್ಲ, ಭವಿಷ್ಯದ ಸುಧಾರಣೆಯ ಪ್ರಕ್ರಿಯೆಗಳನ್ನೂ ಜಾರಿಗೊಳಿಸಿದೆ. ಭಾರತ ವಾರ್ಷಿಕ 50 ಲಕ್ಷ ಟನ್ ಗ್ರೀನ್ ಹೈಡ್ರೋಜನ್ ಅನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಹೈಡ್ರೋಜನ್ ಮಿಶನ್ ಅಡಿಯಲ್ಲಿ ಖಾಸಗಿ ವಲಯದಲ್ಲಿ 19,000 ಕೋಟಿ ರೂ. ಇನ್ಸೆಂಟಿವ್ ನೀಡಲಾಗುತ್ತಿದೆ. ಹಳೆಯ ವಾಹನಗಳ ಗುಜರಿ ನೀತಿಯಡಿಯಲ್ಲಿ 3,000 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. 15 ವರ್ಷ ಹಳೆಯ 3 ಲಕ್ಷ ಸರ್ಕಾರಿ ವಾಹನಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.
ಏನಿದು ಹಸಿರು ಇಂಧನ? ನೈಸರ್ಗಿಕ ಸಂಪನ್ಮೂಲದಿಂದ ಉತ್ಪಾದನೆಯಾಗುವ ಇಂಧನ ಹಸಿರು ಇಂಧನವಾಗುತ್ತದೆ. ಸೂರ್ಯನ ಪ್ರಕಾಶ, ಗಾಳಿ, ಜಲದಿಂದ ಉತ್ಪಾದಿಸುವ ವಿದ್ಯುತ್ ಹಸಿರು ಇಂಧನವಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಆಗುವುದಿಲ್ಲ. ಏಕೆಂದರೆ ಇದು ಫಾಸಿಲ್ ಫ್ಯುಯೆಲ್ ಅಲ್ಲ.