ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Bengaluru Airport) ಎರಡನೇ ಟರ್ಮಿನಲ್ ಅಥವಾ ನಿಲ್ದಾಣವನ್ನು ನಾಳೆ (ನ.೧೧) ಉದ್ಘಾಟಿಸಲಿದ್ದಾರೆ. ಇದರ ವಿಶೇಷತೆ ಮತ್ತು ಮಹತ್ವ ಏನು? ಇಲ್ಲಿದೆ ವಿವರ.
ಬೆಂಗಳೂರಿನಿಂದ 30 ಕಿ.ಮೀ ದೂರದಲ್ಲಿದೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು ದಿಲ್ಲಿ, ಮಂಬಯಿ ಬಳಿಕ ದೇಶದ ಮೂರನೇ ಅತ್ಯಂತ ಬ್ಯುಸಿ ಏರ್‌ಪೋರ್ಟ್ ಆಗಿದೆ.
ಎರಡನೇ ಟರ್ಮಿನಲ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ, ಮುಂಬಯಿ ಏರ್‌ಪೋರ್ಟ್ ಅನ್ನು ಹಿಂದಿಕ್ಕಿ ಎರಡನೇ ಅತ್ಯಂತ ಬ್ಯುಸಿ ಏರ್‌ಪೋರ್ಟ್ ಆಗಿ ಬೆಂಗಳೂರು ಏರ್‌ಪೋರ್ಟ್ ಹೊರಹೊಮ್ಮಲಿದೆ.
ಒಟ್ಟು 2.54 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ಮೊದಲ ಹಂತ ನಿರ್ಮಾಣವಾಗುತ್ತಿದೆ. ಈಗಾಗಲೇ 5,000 ಕೋಟಿ ರೂ. ಹೂಡಿಕೆ ಆಗಿದೆ.
ಸುಸಜ್ಜಿತ ಚೆಕ್ ಇನ್ ಕೌಂಟರ್, ಸೆಕ್ಯುರಿಟಿ ಲೇನ್, ಎಮಿಗ್ರೇಶನ್ ಕೌಂಟರ್, ಕಸ್ಟಮ್ಸ್ ಹ್ಯಾಂಡ್ ಬ್ಯಾಗ್ ತಪಾಸಣೆ, ಶಾಪಿಂಗ್ ಮಾಲ್, ರೆಸ್ಟೋರೆಂಟ್ ಸೌಲಭ್ಯ. ಉದ್ಯಾನ ನಗರಿಯ ಹೆಗ್ಗಳಿಕೆ, ಕರ್ನಾಟಕದ ಸಂಸ್ಕೃತಿ, ಪರಂಪರೆ ಬಿಂಬಿಸುವ ವಿನ್ಯಾಸ, ಹಸಿರೀಕರಣದ ಅಲಂಕಾರವನ್ನು ಟರ್ಮಿನಲ್ ಹೊಂದಿದೆ.
ಎರಡನೇ ಹಂತದ ಕಾಮಗಾರಿ ಮುಂದಿನ ವರ್ಷ ಆರಂಭವಾಗುವ ನಿರೀಕ್ಷೆ ಇದೆ. ಎರಡನೇ ಟರ್ಮಿನಲ್ 4.41 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರ-ಕೇಂದ್ರ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಎರಡನೇ ಟರ್ಮಿನಲ್ ನಿರ್ಮಾಣವಾಗಿದೆ.
ಏರ್‌ಪೋರ್ಟ್ ಸಾಮರ್ಥ್ಯ ವೃದ್ಧಿ:
ಎರಡನೇ ಟರ್ಮಿನಲ್ ಪರಿಣಾಮ ಬೆಂಗಳೂರು ಏರ್‌ಪೋರ್ಟ್‌ನ ಸಾಮರ್ಥ್ಯ ಎರಡು ಪಟ್ಟು ವೃದ್ಧಿಸಲಿದೆ. ಎರಡನೇ ಟರ್ಮಿನಲ್‌ನ ಮೊದಲ ಹಂತದಿಂದ ಏರ್‌ಪೋರ್ಟ್ ವಾರ್ಷಿಕ 2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಗಳಿಸಲಿದೆ. ಎರಡನೇ ಹಂತ ಪೂರ್ಣವಾದ ಬಳಿಕ ವಾರ್ಷಿಕ 5-6 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಸಿಗಲಿದೆ.
ಎರಡನೇ ರನ್‌ವೇ: ಇದುವರೆಗೆ, ಬೆಂಗಳೂರು ಏರ್‌ಪೋರ್ಟ್ ಕೇವಲ ಒಂದೇ ಟರ್ಮಿನಲ್ ಮತ್ತು ರನ್‌ವೇ ಹೊಂದಿತ್ತು. ಹೀಗಾಗಿ ಎರಡನೇ ಟರ್ಮಿನಲ್ ಮತ್ತು ರನ್‌ವೇ ತುರ್ತು ಅನಿವಾರ್ಯವಾಗಿತ್ತು. ಎರಡನೇ ಟರ್ಮಿನಲ್‌ಗೆ ಮೆಟ್ರೊ, ಟ್ಯಾಕ್ಸಿ, ಸಾರ್ವಜನಿಕ ಬಸ್ ಸಂಪರ್ಕ ಸೌಲಭ್ಯ ಸಿಗಲಿದೆ.
ಸರಕು ಸಾಗಣೆಗೆ ಪ್ರಮುಖ ತಾಣ: ಪುಷ್ಟೋದ್ಯಮ, ಹಣ್ಣು-ತರಕಾರಿಗಳಿಂದ ಆಟೊಮೊಬೈಲ್ ಬಿಡಿಭಾಗಗಳು, ಎಂಜಿನಿಯರಿಂಗ್ ಉತ್ಪಾದನೆಯ ವಸ್ತುಗಳ ತನಕ ನಾನಾ ಸರಕುಗಳ ದೇಶೀಯ- ಅಂತಾರಾಷ್ಟ್ರೀಯ ಸಾಗಣೆಗೆ ಬೆಂಗಳೂರು ಏರ್‌ಪೋರ್ಟ್ ಪ್ರಮುಖ ತಾಣವಾಗುತ್ತಿರುವುದರಿಂದ ಹೊಸ ಟರ್ಮಿನಲ್‌ಗೆ ಬೇಡಿಕೆ ಉಂಟಾಗಿತ್ತು.
ಬೆಂಗಳೂರು ಮಾತ್ರವಲ್ಲದೆ, ಇತರ ಜಿಲ್ಲೆ, ನಗರಗಳ ಸರಕುಗಳ ರಫ್ತಿಗೆ ಬೆಂಗಳೂರು ಏರ್‌ಪೋರ್ಟ್ ಪ್ರಮುಖ ತಾಣವಾಗಿ ಹೊರಹೊಮ್ಮಿದೆ. ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪುಷ್ಟಿ ನೀಡಲಿದೆ.
ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರ, ತೆಲಂಗಾಣದ ಉದ್ದಿಮೆಗಳೂ ಸರಕುಗಳ ರಫ್ತಿಗೆ ಬೆಂಗಳೂರು ಏರ್‌ಪೋರ್ಟ್ ಅನ್ನು ಬಳಸುತ್ತಿವೆ.