ನವ ದೆಹಲಿ: ದೇಶದಲ್ಲಿ ಹಣಕಾಸು ಸೇವೆಗಳನ್ನು ವ್ಯಾಪಕಗೊಳಿಸುವ ಮತ್ತೊಂದು ಕ್ರಮವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (Digital Banking Units- ಡಿಬಿಯು) ರಾಷ್ಟ್ರಕ್ಕೆ ಭಾನುವಾರ ಸಮರ್ಪಿಸಿದರು.
ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಜನತೆಗೆ ವ್ಯಾಪಕವಾಗಿ ಒದಗಿಸಲಿದೆ ಎಂದು ಪ್ರಧಾನಿ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ತಿಳಿಸಿದರು.
2022-23ರ ಬಜೆಟ್ ಭಾಷಣದಲ್ಲಿ, ಸ್ವಾತಂತ್ರ್ಯದ 75ನೇ ವರ್ಷದ ಸ್ಮರಣೆಗಾಗಿ 75 ಜಿಲ್ಲೆಗಳಲ್ಲಿ 75 ಡಿಬಿಯುಗಳನ್ನು ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದರು. ಡಿಜಿಟಲ್ ಬ್ಯಾಂಕಿಂಗ್ ನ ಪ್ರಯೋಜನಗಳು ದೇಶದ ಮೂಲೆ ಮೂಲೆಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಡಿಬಿಯುಗಳನ್ನು ಸ್ಥಾಪಿಸಲಾಗಿದೆ. ಮತ್ತು ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುತ್ತದೆ. 11 ಸಾರ್ವಜನಿಕ ವಲಯದ ಬ್ಯಾಂಕುಗಳು, 12 ಖಾಸಗಿ ವಲಯದ ಬ್ಯಾಂಕುಗಳು ಮತ್ತು ಒಂದು ಸಣ್ಣ ಹಣಕಾಸು ಬ್ಯಾಂಕ್ ಈ ಯೋಜನೆಯಲ್ಲಿ ಕೈ ಜೋಡಿಸಿವೆ.
ಡಿಬಿಯುಗಳಲ್ಲಿ ಲಭ್ಯವಿರುವ ಹಣಕಾಸು ಸೇವೆಗಳು
ಡಿಬಿಯುಗಳ ಕಚೇರಿಗಳಲ್ಲಿ ಜನತೆ ಕೆಳಕಂಡ ಹಲವು ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಬಹುದು. ಉಳಿತಾಯ ಖಾತೆ ತೆರೆಯುವುದು, ಖಾತೆಯಲ್ಲಿರುವ ಹಣದ ವಿವರ ನೋಡುವುದು, ಪಾಸ್ ಪುಸ್ತಕದ ಮುದ್ರಣ, ನಿಧಿಗಳ ವರ್ಗಾವಣೆ, ಸ್ಥಿರ ಠೇವಣಿಗಳಲ್ಲಿ ಹೂಡಿಕೆ, ಸಾಲದ ಅರ್ಜಿಗಳು, ವಿತರಿಸಿದ ಚೆಕ್ ಗಳಿಗೆ ಹಣ ಪಾವತಿಸದಂತೆ (ಸ್ಟಾಪ್-ಪೇಮೆಂಟ್) ಸೂಚನೆಗಳು, ಕ್ರೆಡಿಟ್ / ಡೆಬಿಟ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದು, ಖಾತೆಯ ವಹಿವಾಟಿನ್ನು ನೋಡುವುದು, ತೆರಿಗೆಗಳನ್ನು ಪಾವತಿಸುವುದು, ಬಿಲ್ ಗಳನ್ನು ಪಾವತಿಸುವುದು, ನಾಮನಿರ್ದೇಶನಗಳನ್ನು ಮಾಡುವುದು ಮುಂತಾದ ಸೌಲಭ್ಯಗಳನ್ನು ಜನರಿಗೆ ಒದಗಿಸಲಿವೆ.
ಡಿಬಿಯುಗಳು ಡಿಜಿಟಲ್ ಹಣಕಾಸು ಸಾಕ್ಷರತೆಯನ್ನು ಪಸರಿಸುತ್ತವೆ. ಸೈಬರ್ ಭದ್ರತೆ ಜಾಗೃತಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಗ್ರಾಹಕರ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತವೆ. ಅಲ್ಲದೆ, ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಸಕಾಲಿಕ ಸಹಾಯವನ್ನು ನೀಡಲು ಸಾಕಷ್ಟು ಡಿಜಿಟಲ್ ವ್ಯವಸ್ಥೆಯನ್ನು ಹೊಂದಿವೆ.