Site icon Vistara News

National Logistics policy | ಹುಟ್ಟು ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ: ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿಗೆ ಚಾಲನೆ

trucks

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ತಮ್ಮ ೭೨ನೇ ಜನ್ಮ ದಿನದಂದು ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿಗೆ ಚಾಲನೆ ನೀಡಲಿದ್ದಾರೆ. (National Logistics Policy)

ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿಯ ಪರಿಣಾಮ ಭಾರತದಾದ್ಯಂತ ಚೆಕ್‌ ಪೋಸ್ಟ್‌ಗಳ ಹಂಗಿಲ್ಲದೆ ಸೀಮಾತೀತವಾಗಿ ಸರಕುಗಳ ಸಾಗಣೆಗೆ ಟ್ರಕ್‌ಗಳಿಗೆ ಹಾದಿ ಸುಗಮವಾಗಲಿದೆ. ರಸ್ತೆ ಸಾರಿಗೆಯ ಮರು ಎಂಜಿನಿಯರಿಂಗ್‌, ಡಿಜಿಟಲೀಕರಣ, ಹಲವು ಮಾದರಿಗಳ ಸಾರಿಗೆ ನೀತಿಯನ್ನು ಇದು ಒಳಗೊಂಡಿದೆ ಎಂದು ವಾಣಿಜ್ಯ ಸಚಿವ ಪಿಯೂಷ್‌ ಗೋಯೆಲ್‌ ತಿಳಿಸಿದ್ದಾರೆ.

ಏನಿದು ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2020ರ ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಭಾರತದಲ್ಲಿ ಲಾಜಿಸ್ಟಿಕ್ಸ್‌ ವೆಚ್ಚವನ್ನು ಕಡಿಮೆಗೊಳಿಸುವುದು ಇದರ ಪ್ರಧಾನ ಉದ್ದೇಶ. ಅಂದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಕು ಅಥವಾ ನಾನಾ ವಸ್ತುಗಳನ್ನು ಸಾಗಿಸುವ ಖರ್ಚನ್ನು ಕಡಿಮೆ ಮಾಡುವುದು. ಇದಕ್ಕಾಗಿ ತಂತ್ರಜ್ಞಾನದ ಬಳಕೆ, ಮೂಲಸೌಕರ್ಯ ಅಭಿವೃದ್ಧಿ, ಹಲವು ಮಾದರಿಗಳ ಸಾರಿಗೆ ವ್ಯವಸ್ಥೆಯ ಅನುಷ್ಠಾನ. ಭಾರತದಲ್ಲಿ ಲಾಜಿಸ್ಟಿಕ್ಸ್‌ ವೆಚ್ಚವು ಜಿಡಿಪಿಯ 13-24% ಇದ್ದರೆ, ಜರ್ಮನಿ, ಜಪಾನ್‌ನಲ್ಲಿ ಕೇವಲ 8-9% ಮಾತ್ರ ಇರುತ್ತದೆ. ಹೀಗಾಗಿ ಅದೇ ಮಾದರಿಯಲ್ಲಿ ಇಲ್ಲೂ ವೆಚ್ಚ ಇಳಿಸುವುದು ಈ ನೀತಿಯ ಗುರಿ. ಇದರಿಂದ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ.

ಡಿಜಿಟಲ್‌ ವ್ಯವಸ್ಥೆಯ ಸಂಯೋಜನೆ: ( Integration digital system) ನೂತನ ನೀತಿಯ ಅಡಿಯಲ್ಲಿ ರಸ್ತೆ ಸಾರಿಗೆ, ರೈಲ್ವೆ, ಕಸ್ಟಮ್ಸ್‌, ವೈಮಾನಿಕ, ಬಂದರು, ಜಲ ಸಾರಿಗೆ, ವಿದೇಶ ವ್ಯಾಪಾರ ಮತ್ತು ವಾಣಿಜ್ಯ ಸಚಿವಾಲಯಗಳು, ಇಲಾಖೆಗಳು ತಮ್ಮದೇ ಡಿಜಿಟಲ್‌ ಡೇಟಾಗಳನ್ನು ಹೊಂದಲಿವೆ. ಹಾಗೂ ಇವುಗಳ ಸಂಯೋಜನೆ ನಡೆಯಲಿದೆ. ಐಡಿಎಸ್‌ ಅಡಿಯಲ್ಲಿ ನಡೆಯಲಿರುವ ಈ ಡೇಟಾ ಸಂಯೋಜನೆಯಿಂದ ಲಾಜಿಸ್ಟಿಕ್ಸ್‌ ಸುಧಾರಿಸಲಿದೆ. ಇದರಿಂದ ವೆಚ್ಚ ತಗ್ಗಲಿದೆ.

ಏಕೀಕೃತ ಲಾಜಿಸ್ಟಿಕ್ಸ್‌ ಇಂಟರ್‌ಫೇಸ್‌ ಪ್ಲಾಟ್‌ಫಾರ್ಮ್‌ ರಚನೆಯಾಗಲಿದ್ದು ಇದು ಕೂಡ ಸುಗಮ ಸಂಚಾರಕ್ಕೆ ಸಹಕರಿಸಲಿದೆ. ಲಾಜಿಸ್ಟಿಕ್ಸ್‌ ಕುರಿತ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವ್ಯವಸ್ಥೆ ಅಳವಡಿಕೆಯಾಗಲಿದೆ. ಸಾರಿಗೆ ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ 196 ನಿರ್ಣಾಯಕ ಯೋಜನೆಗಳನ್ನು ಗುರುತಿಸಲಾಗಿದೆ. ಇವುಗಳ ಜಾರಿಯಿಂದ ಕಲ್ಲಿದ್ದಲು, ಉಕ್ಕು, ಆಹಾರ ಪದಾರ್ಥಗಳ ದೇಶ ವ್ಯಾಪಿ ಸಾಗಣೆಗೆ ಅನುಕೂಲವಾಗಲಿದೆ. ಸಮಯ ಮತ್ತು ವೆಚ್ಚ ಎರಡೂ ಉಳಿತಾಯವಾಗಲಿದೆ.

Exit mobile version