ಚಂಡೀಗಢ: ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಮತ್ತಿತರ ಉಚಿತ ಯೋಜನೆಗಳನ್ನು ಜಾರಿಗೊಳಿಸಲು ಸಂಪನ್ಮೂಲಕ್ಕೆ ಪರದಾಡುತ್ತಿರುವ ಆ್ಯಪ್ ಸರ್ಕಾರ, ಇದೀಗ ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಏರಿಸುವ ಮೂಲಕ ಶಾಕ್ ನೀಡಿದೆ. ( Punjab Petrol Price hike)
ಪಂಜಾಬ್‌ನಲ್ಲಿ ವ್ಯಾಟ್ ಹೆಚ್ಚಳದ ಪರಿಣಾಮ ಪ್ರತಿ ಲೀಟರ್ ಪೆಟ್ರೋಲ್ ದರ 98.65 ರೂ. ಹಾಗೂ ಡೀಸೆಲ್ ದರ 88.95 ರೂ.ಗೆ ಏರಿಕೆಯಾಗಿದೆ. ಪಂಜಾಬ್ ಸರ್ಕಾರ ಪ್ರತಿ ತಿಂಗಳು 300 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತದೆ. ಆದರೆ ಇದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಹೀಗಾಗಿ ಇದೀಗ ಪೆಟ್ರೋಲ್-ಡೀಸೆಲ್ ಮೇಲೆ ವ್ಯಾಟ್ ಹೆಚ್ಚಿಸುವ ಮೂಲಕ ತೆರಿಗೆ ಆದಾಯ ಹೆಚ್ಚಿಸಲು ನಿರ್ಧರಿಸಿದೆ.
ಇಳಿಯಲಿದೆಯೇ ತೈಲ ದರ? ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಸ್ಥಿರವಾಗಿದ್ದರೆ ಮುಂದಿನ ಮೂರು ತಿಂಗಳುಗಳಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಪೆಟ್ರೋಲ್-ಡೀಸೆಲ್ ದರವನ್ನು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ. ಕೆಲ ರಾಜ್ಯಗಳಲ್ಲಿ ಸರ್ಕಾರಗಳು ಉಚಿತ ಕೊಡುಗೆಗಳನ್ನು ಘೋಷಿಸುತ್ತವೆ. ಆದರೆ ಫ್ರೀಬೀಸ್ ರಾಜಕಾರಣದ ಅಪಾಯವನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಚಂಡೀಗಢದಲ್ಲಿ ಪೆಟ್ರೋಲ್ ವಾಹನಗಳ ಮಾರಾಟ ನಿಷೇಧ: ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಈ ವರ್ಷ ಜುಲೈ 1ರಿಂದ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಡಿಸೆಂಬರ್ ವೇಳೆಗೆ ಪೆಟ್ರೋಲ್-ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನಗಳ ನೋಂದಣಿಯೂ ಬ್ಯಾನ್ ಆಗಲಿದೆ. ಚಂಡೀಗಢದ ಸಾರಿಗೆ ವ್ಯವಸ್ಥೆಯನ್ನು ಪರಿಸರಸ್ನೇಹಿಯಾಗಿಸುವುದು ಇದರ ಉದ್ದೇಶ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆಯಾಗಿದೆ. ಚಂಡೀಗಢ ಆಡಳಿತವು ಎಲೆಕ್ಟ್ರಿಕ್ ವಾಹನ ನೀತಿ 2022 ಅನ್ನು ಈ ಹಿಂದೆ ಬಿಡುಗಡೆಗೊಳಿಸಿತ್ತು. ಅದರಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿ ಸಂಸ್ಕೃತಿ ಬೆಳೆಸಲು ಪ್ರಸ್ತಾಪಿಸಲಾಗಿತ್ತು.
ಇಡೀ ದೇಶದಲ್ಲಿಯೇ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟವನ್ನು ನಿಷೇಧಿಸಿದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಚಂಡೀಗಢ ಇದರೊಂದಿಗೆ ಪಾತ್ರವಾಗಿದೆ. ಈ ನಿರ್ಧಾರದಿಂದ ಚಂಡೀಗಢ ಹಾಗೂ ಸುತ್ತುಮುತ್ತಲಿನ ಜನ ತಾವಾಗಿಯೇ ಪೆಟ್ರೋಲ್-ಡೀಸೆಲ್ ಚಾಲಿತ ವಾಹನ ಬಳಕೆಯನ್ನು ಸ್ಥಗಿತಗೊಳಿಸುವ ನಿರೀಕ್ಷೆಯೂ ಇದೆ.
ಇದನ್ನೂ ಓದಿ: Free Bus Service: ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ: ಆಟೋ ಚಾಲಕರ ಆಕ್ರೋಶ