Site icon Vistara News

GOOD NEWS: ಪ್ರಮುಖ ರೇಟಿಂಗ್‌ ಏಜೆನ್ಸಿಗಳಿಂದ ಭಾರತದ ಆರ್ಥಿಕ ಸ್ಥಿರತೆಯ ಮುನ್ನೋಟ

production

ನವದೆಹಲಿ: ಜಾಗತಿಕ ಮಟ್ಟದ ಮೂರು ಪ್ರಮುಖ ರೇಟಿಂಗ್‌ ಏಜೆನ್ಸಿಗಳಾದ ಮೂಡೀಸ್‌, S&P ಮತ್ತು ಫಿಚ್‌ ರೇಟಿಂಗ್ಸ್‌ ಭಾರತದ ಆರ್ಥಿಕ ಸ್ಥಿರತೆಯ ಮುನ್ನೋಟವನ್ನು ನೀಡಿದ್ದು, ಕೇಂದ್ರ ಸರಕಾರಕ್ಕೆ ನಿರಾಳ ಮೂಡಿಸಿದೆ.

ಕೋವಿಡ್-‌19 ಬಿಕ್ಕಟ್ಟಿನ ಆಘಾತದ ಬಳಿಕ ಕುಸಿದಿದ್ದ ಆರ್ಥಿಕತೆ ಈಗ ಗಣನೀಯ ಚೇತರಿಸುತ್ತಿದೆ. ಕೇಂದ್ರ ಸರಕಾರ ಮೂಲಸೌಕರ್ಯ ವಲಯಕ್ಕೆ ಆದ್ಯತೆ ನೀಡಿದೆ. ಹಣಕಾಸು ವಲಯದ ಸುಧಾರಣೆಯಾಗುತ್ತಿದೆ. ಹೀಗಿದ್ದರೂ ಸವಾಲುಗಳೂ ಇವೆ ಎಂದು ರೇಟಿಂಗ್‌ ಏಜೆನ್ಸಿಗಳು ತಿಳಿಸಿವೆ.

ಭಾರತದ ಕ್ರೆಡಿಟ್‌ ರೇಟಿಂಗ್‌ ಹಾಗೂ ಆರ್ಥಿಕತೆಯ ಬಗ್ಗೆ ಸ್ಥಿರತೆಯ ಮುನ್ನೋಟವನ್ನು ಈ ರೇಟಿಂಗ್‌ ಏಜೆನ್ಸಿಗಳು ನೀಡಿವೆ. ದೇಶದ ವಿದೇಶಿ ವಿನಿಮಯ ಸಂಗ್ರಹ ಸಮೃದ್ಧವಾಗಿದ್ದು, ಯಾವುದೇ ಬಾಹ್ಯ ಸವಾಲುಗಳನ್ನು ಎದುರಿಸಲು ಸಶಕ್ತವಾಗಿದೆ ಎಂದು ಫಿಚ್‌ ರೇಟಿಂಗ್ಸ್‌ ತಿಳಿಸಿದೆ.

2022ರ ಮಾರ್ಚ್‌ ಅಂತ್ಯಕ್ಕೆ ಮುಕ್ತಾಯವಾದ 2021-22ರ ಸಾಲಿನಲ್ಲಿ ಜಿಡಿಪಿ 8.7%ಕ್ಕೆ ಚೇತರಿಸಿರುವುದು ಹಾಗೂ 2022-23ರಲ್ಲಿ 8% ರ ಬೆಳವಣಿಗೆಯ ಮುನ್ನೋಟ ಸಕಾರಾತ್ಮಕ ಎಂದು ರೇಟಿಂಗ್‌ ಏಜೆನ್ಸಿಗಳು ತಿಳಿಸಿವೆ.

ಕಚ್ಚಾ ತೈಲ ದರ ಏರಿಕೆ, ಹಣದುಬ್ಬರ ಹೆಚ್ಚಳದ ಪರಿಣಾಮ 2022-23ರಲ್ಲಿ ಜಿಡಿಪಿ ಬೆಳವಣಿಗೆ ಮುನ್ನೋಟದಲ್ಲಿ ರೇಟಿಂಗ್‌ ಏಜೆನ್ಸಿಗಳು ಇಳಿಕೆ ಮಾಡಿದ್ದರೂ, ಆರ್ಥಿಕತೆ ದೃಢವಾಗಿ ಬೆಳವಣಿಗೆಯತ್ತ ಸಾಗುತ್ತಿದೆ ಎಂಬ ಸಕಾರಾತ್ಮಕ ಅಂಶವನ್ನು ಪ್ರತಿಪಾದಿಸಿವೆ.

ಕಾರ್ಖಾನೆಗಳಲ್ಲಿ ಉತ್ಪಾದನೆ ಹೆಚ್ಚಳ

ಕಳೆದ ಏಪ್ರಿಲ್‌ನಲ್ಲಿ ಕಾರ್ಖಾನೆಗಳಲ್ಲಿ ಉತ್ಪಾದನೆ ಶೇ.7.1 ಹೆಚ್ಚಳವಾಗಿದೆ ಎಂದು ಎನ್‌ಎಸ್‌ಒ ಅಂಕಿ ಅಂಶಗಳು ತಿಳಿಸಿವೆ. ವಿದ್ಯುತ್‌ ಮತ್ತು ಗಣಿಗಾರಿಕೆ ವಲಯದಲ್ಲಿ ಉತ್ಪಾದನೆ ಚೇತರಿಸಿದೆ. ಉತ್ಪಾದನಾ ಕ್ಷೇತ್ರ ಏಪ್ರಿಲ್‌ನಲ್ಲಿ 6.3% ಚೇತರಿಸಿದೆ.

ದೇಶದ ಸೇವಾ ವಲಯದ ಚಟುವಟಿಕೆಗಳು ಕೂಡ ಕಳೆದ ಮೇನಲ್ಲಿ ಪ್ರಬಲ ಚೇತರಿಕೆ ದಾಖಲಿಸಿದೆ. ಕಳೆದ 11 ವರ್ಷಗಳಲ್ಲಿಯೇ ಗರಿಷ್ಠ ಬೆಳವಣಿಗೆ ದಾಖಲಿಸಿದೆ.

ಅಮೆರಿಕದ ಹಣಕಾಸು ಇಲಾಖೆ ವರದಿ

ಭಾರತ ಕೋವಿಡ್‌-19 ಅಲೆಯ ಹೊಡೆತದ ಹೊರತಾಗಿಯೂ ಗಣನೀಯ ಆರ್ಥಿಕ ಪ್ರಗತಿಯನ್ನು ದಾಖಲಿಸಿದೆ ಎಂದು ಅಮೆರಿಕದ ಹಣಕಾಸು ಇಲಾಖೆ ವರದಿ ತಿಳಿಸಿದೆ. 2021ರ ಮಧ್ಯಭಾಗದಲ್ಲಿ ಕೋವಿಡ್‌ ಎರಡನೆಯ ಅಲೆ ಜೋರಾಗಿತ್ತು. ಇದು ಆರ್ಥಿಕ ಬೆಳವಣಿಗೆಯನ್ನು ವಿಳಂಬಗೊಳಿಸಿತ್ತು. ಹೀಗಿದ್ದರೂ, ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕತೆ ಚೇತರಿಸಿತ್ತು. ವ್ಯಾಪಕ ಲಸಿಕೆ ವಿತರಣೆ ಕಾರ್ಯಕ್ರಮ ಪರಿಣಾಮಕಾರಿಯಾಗಿತ್ತು ಎಂದು ವರದಿಯಲ್ಲಿ ಶ್ಲಾಘಿಸಲಾಗಿದೆ.

Exit mobile version