ಭಾರತಕ್ಕೆ ಅನುಕೂಲವೇನು?
- ತಕ್ಷಣಕ್ಕೆ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುವಾಗ ಡಾಲರ್ ಬೇಕಾಗುವುದಿಲ್ಲ. ರೂಪಾಯಿಯಲ್ಲೇ ವ್ಯವಹರಿಸಬಹುದು.
- ಆರ್‌ಬಿಐಗೆ ಡಾಲರ್ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು
- ಜಾಗತಿಕ ವ್ಯವಹಾರಗಳಲ್ಲಿ ರೂಪಾಯಿಯ ಬಳಕೆ ಹೆಚ್ಚಳಕ್ಕೆ ಅನುಕೂಲ
- ಅಂತಾರಾಷ್ಟ್ರೀಯ ಕರೆನ್ಸಿಯಾಗಿ ರೂಪಾಯಿ ಬಲವರ್ಧನೆಗೆ ಹಾದಿ
- ಭಾರತದ ಆಮದಿಗೆ ಹೆಚ್ಚು ಪ್ರಯೋಜನ
ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೂಪಾಯಿ ಮೂಲಕ ಆಮದು-ರಫ್ತುಗಳ ಅಂತಾರಾಷ್ಟ್ರೀಯ ಪೇಮೆಂಟ್ ವ್ಯವಹಾರಗಳನ್ನು ನಡೆಸಲು ಅನುಮತಿ ನೀಡಿದೆ. ರೂಪಾಯಿಯನ್ನು ಜಾಗತೀಕರಣಗೊಳಿಸುವ ನಿಟ್ಟಿನಲ್ಲಿ ಆರ್‌ಬಿಐ ಒಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸಲು ಅನುಕೂಲವಾಗಲಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳ ವ್ಯಾಪಕವಾದ ನಿರ್ಬಂಧಗಳ ಪರಿಣಾಮ ರಷ್ಯಾವು ಸ್ಟ್ಯಾಂಡರ್ಡ್ ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆಗಳಿಂದ ದೂರ ಉಳಿದಿದೆ. ಇದೀಗ ರೂಪಾಯಿ ಮೂಲಕ ಅಂತಾರಾಷ್ಟ್ರೀಯ ಪಾವತಿಗೆ ಅವಕಾಶ ಕಲ್ಪಿಸಿರುವುದರಿಂದ, ಭಾರತದಿಂದ ರಫ್ತು ವಹಿವಾಟು ವೃದ್ಧಿಗೆ ಅವಕಾಶವಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಭಾರತದ ವ್ಯಾಪಾರ ಕೊರತೆ ಹೆಚ್ಚುತ್ತಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಗಣನೀಯ ಕುಸಿದಿದೆ. ಇದರಿಂದ ಆಮದು ವೆಚ್ಚ ದುಬಾರಿಯಾಗುತ್ತಿದ್ದು, ಇದು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ರೂಪಾಯಿ ಬಳಕೆ ಹೆಚ್ಚಿದರೆ, ಆರ್‌ಬಿಐಗೆ ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ತಗ್ಗಿಸಬಹುದು. ಮುಖ್ಯವಾಗಿ ಡಾಲರ್ ಮೇಲಿನ ಬೇಡಿಕೆಯನ್ನು ನಿಯಂತ್ರಿಸಬಹುದು.
ರೂಪಾಯಿಯನ್ನು ಅಂತಾರಾಷ್ಟ್ರೀಯ ಪೇಮೆಂಟ್ ವ್ಯವಹಾರಗಳಲ್ಲಿ ಬಳಕೆಗೆ ಅನುಮತಿ ನೀಡುವುದರಿಂದ ಸೊಸೈಟಿ ಫಾರ್ ವರ್ಲ್ಡ್‌ವೈಡ್ ಇಂಟರ್‌ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಶನ್ (SWIFT) ಎಂಬ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಪೇಮೆಂಟ್ಸ್ ವ್ಯವಸ್ಥೆಯಿಂದ ಹೊರಗುಳಿದಿರುವ ರಷ್ಯಾ ಮುಂತಾದ ದೇಶಗಳ ಜತೆ ರೂಪಾಯಿಯಲ್ಲಿಯೇ ವ್ಯವಹರಿಸಲು ಅನುಕೂಲವಾಗಲಿದೆ. ರಷ್ಯಾವು ಉಕ್ರೇನ್‌ಗೆ ದಾಳಿ ಮಾಡಿದ ಬಳಿಕ ಯುರೋಪ್ ಮತ್ತು ನ್ಯಾಟೊ ರಷ್ಯಾವನ್ನು ಈ ಸ್ವಿಫ್ಟ್ ವ್ಯವಸ್ಥೆಯಿಂದ ನಿಷೇಧಿಸಿವೆ.
ರೂಪಾಯಿಯಲ್ಲಿಯೇ ಅಂತಾರಾಷ್ಟ್ರೀಯ ಪೇಮೆಂಟ್ ಮಾಡುವುದರಿಂದ ಭಾರತದ ಆಮದಿಗೆ ಡಾಲರ್ ಬೇಕಾಗುವುದಿಲ್ಲ. ರೂಪಾಯಿಯನ್ನು ಕೊಟ್ಟೇ ಅಗತ್ಯ ವಸ್ತು, ಸೇವೆಗಳನ್ನು ತರಿಸಿಕೊಳ್ಳಬಹುದು. ಆಗ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿತವನ್ನೂ ತಡೆಯಬಹುದು. ರಷ್ಯಾ ಮಾತ್ರವಲ್ಲ, ಇತರ ಯಾವುದೇ ದೇಶದ ಜತೆಗಿನ ವ್ಯವಹಾರಗಳಲ್ಲಿ ರೂಪಾಯಿ ಬಳಸಲು ಆರ್‌ಬಿಐ ಹಾದಿಯನ್ನು ಇದೀಗ ಸುಗಮಗೊಳಿಸಿದೆ.