ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಿನ ಸೇಫ್ ಡಿಪಾಸಿಟ್ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಿಕೊಳ್ಳಲು ಬ್ಯಾಂಕ್‌ಗಳಿಗೆ (Bank locker agreement) ನೀಡಿದ್ದ ಗಡುವನ್ನು 2023ರ ಡಿಸೆಂಬರ್ 31 ತನಕ ವಿಸ್ತರಿಸಿದೆ.
ಒಂದು ವೇಳೆ 2023ರ ಜನವರಿ 1ರೊಳಗೆ ಒಪ್ಪಂದ ನವೀಕರಣವಾಗಿಲ್ಲ ಎಂಬ ಕಾರಣಕ್ಕೆ ಲಾಕರ್‌ಗಳನ್ನು ಸ್ಥಗಿತಗೊಳಿಸಿದ್ದರೆ, ತಕ್ಷಣವೇ ತೆರವುಗೊಳಿಸಬೇಕು ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ ತಿಳಿಸಿದೆ.
ಆರ್‌ಬಿಐ ಈ ಹಿಂದೆ 2021ರ ಆಗಸ್ಟ್ 18ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, 2023ರ ಜನವರಿ 1ರೊಳಗೆ ಈಗಿನ ಸೇಫ್ ಡಿಪಾಸಿಟ್ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಇದೀಗ 2023ರ ಡಿಸೆಂಬರ್ 1ರ ತನಕ ನವೀಕರಿಸಿಕೊಳ್ಳಲು ಕಾಲಾವಕಾಶ ವಿಸ್ತರಣೆಯಾದಂತಾಗಿದೆ.
ಪರಿಷ್ಕೃತ ಒಪ್ಪಂದಗಳಿಗೆ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಇನ್ನೂ ಸಹಿ ಹಾಕದಿರುವುದರಿಂದ ಗಡುವನ್ನು ಆರ್‌ಬಿಐ ಮುಂದೂಡಿದೆ. ಹೊಸ ನಿಯಮಾವಳಿಯ ಬಗ್ಗೆ ಬ್ಯಾಂಕ್‌ಗಳೂ ತಮ್ಮ ಗ್ರಾಹಕರಿಗೆ ಸಕಾಲಕ್ಕೆ ಮಾಹಿತಿ ನೀಡಿರಲಿಲ್ಲ ಎಂಬ ದೂರುಗಳೂ ಬಂದಿತ್ತು.