Site icon Vistara News

Interest rate : ಫೆ.8ಕ್ಕೆ ಆರ್‌ಬಿಐ ಹಣಕಾಸು ನೀತಿ ಪ್ರಕಟ, ಬಡ್ಡಿ ದರ ಏರಿಕೆ ಸಂಭವ

rbi

ನವ ದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಫೆಬ್ರವರಿ 8ರಂದು ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದೆ. ಆರ್ಥಿಕತೆಯ ಮಂದಗತಿ ಸಾಧ್ಯತೆಯ ಕಳವಳ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬಡ್ಡಿ ದರ ಏರಿಕೆ (Interest rate ) ಮಾಡುವ ನಿರೀಕ್ಷೆ ಇದೆ. ಆರ್‌ಬಿಐ (RBI) ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದಲ್ಲಿ 6 ಸದಸ್ಯರ ಹಣಕಾಸು ನೀತಿ ಸಮಿತಿ ಅಭಿವೃದ್ಧಿ ಹಾಗೂ ಜಾಗತಿಕ ಹಣಕಾಸು ಪರಿಸ್ಥಿತಿಗೆ ಪೂರಕವಾಗಿ ನಿರ್ಧರಿಸುವ ನಿರೀಕ್ಷೆ ಇದೆ. 2023ರಲ್ಲಿ ಆರ್‌ಬಿಐನ ಮೊದಲ ಪರಾಮರ್ಶೆ ಇದಾಗಿದೆ. ಕೇಂದ್ರ ಬಜೆಟ್‌ ಮಂಡನೆಯಾಗಿ ವಾರದ ಬಳಿಕ ಆರ್‌ಬಿಐ ನೀತಿ ಪ್ರಕಟವಾಗುತ್ತಿದೆ. ರೆಪೊ ದರ ಏರಿಕೆಯಾದರೆ ಅದನ್ನು ಆಧರಿಸಿದ ಗೃಹ, ವಾಹನ, ಕಾರ್ಪೊರೇಟ್‌ ಸಾಲ ತುಟ್ಟಿಯಾಗಲಿದೆ.

ಆರ್‌ಬಿಐ ತನ್ನ ರೆಪೊ ದರದಲ್ಲಿ 0.25% ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ರಾಯ್ಟರ್ಸ್‌ ಸಮೀಕ್ಷಾ ವರದಿ ಇತ್ತೀಚೆಗೆ ತಿಳಿಸಿದೆ. ( RBI Repo Rate) (ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಫಂಡ್‌ಗೆ ನೀಡುವ ಬಡ್ಡಿ ದರ) ರಾಯ್ಟರ್ಸ್‌ ಕಳೆದ ಜನವರಿ 13-27 ಅವಧಿಯಲ್ಲಿ ಸಮೀಕ್ಷೆ ನಡೆಸಿತ್ತು.

ಆರ್‌ಬಿಐ 2022-23ರಲ್ಲಿ ಡಿಸೆಂಬರ್‌ ತನಕ ಬಡ್ಡಿದರದಲ್ಲಿ 2.25% ಏರಿಸಿತ್ತು. ಪ್ರಸ್ತುತ ರೆಪೊ ದರ 6.25% ಇದೆ. ರೆಪೊ ದರ ಏರಿಕೆಯಾದರೆ ಠೇವಣಿಗಳ ಬಡ್ಡಿ ದರ ಹಾಗೂ ಸಾಲದ ಬಡ್ಡಿ ದರ ಎರಡೂ ಏರಿಕೆಯಾಗಲಿದೆ. ಕಳೆದ ಮೇ ಬಳಿಕ ಎಫ್‌ಡಿ ದರಗಳು ಏರುಗತಿಯಲ್ಲಿವೆ. ಸಾಲದ ಇಎಂಐ ಹೆಚ್ಚಳವಾಗಲಿದೆ. ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ ತನ್ನ ರೆಪೊ ದರವನ್ನು ಏರಿಸುತ್ತಿದೆ. ಕಳೆದ ಡಿಸೆಂಬರ್‌ನಿಂದ ಹಣದುಬ್ಬರ ಇಳಿಮುಖವಾಗುತ್ತಿದೆ.

Exit mobile version