Site icon Vistara News

Paytm Payments Bank : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿಲ್ಲಿಸಲು ಮಾರ್ಚ್ 15ರವರೆಗೆ ಗಡುವು ವಿಸ್ತರಣೆ

Paytim Payment Bank

ಬೆಂಗಳೂರು: ಗ್ರಾಹಕರ ಖಾತೆಗಳಲ್ಲಿ ಠೇವಣಿ, ಸಾಲ ವಹಿವಾಟು ಮತ್ತು ಟಾಪ್-ಅಪ್​ಗಳನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ (Paytm Payments Bank ) ಇನ್ನೂ 15 ದಿನಗಳ ವಿನಾಯಿತಿ ನೀಡಿದೆ. ದಿನಾಂಕವನ್ನು ಈ ಹಿಂದೆ ನಿಗದಿಪಡಿಸಿದ ಫೆಬ್ರವರಿ 29, 2024 ರಿಂದ ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ.

ಪಾಲುದಾರ ಬ್ಯಾಂಕುಗಳಲ್ಲಿ ಇರಿಸಲಾಗಿರುವ ಗ್ರಾಹಕರ ಠೇವಣಿಗಳನ್ನು ಸಮಸ್ಯೆಯಿಲ್ಲದೇ ಹಿಂಪಡೆಯಲು ಅನುಕೂಲವಾಗುವಂತೆ ಆರ್​ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ನಿರ್ದೇಶನ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರ ಖಾತೆಗಳಲ್ಲಿ ಠೇವಣಿ, ಕ್ರೆಡಿಟ್ ಅಥವಾ ಟಾಪ್-ಅಪ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವುದನ್ನು ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ ನಿಷೇಧಿಸಿತ್ತು. ಹೆಚ್ಚುವರಿಯಾಗಿ, ಫೆಬ್ರವರಿ 29ರಿಂದ ಯುಪಿಐ ಸೌಲಭ್ಯಗಳು ಮತ್ತು ಹಣ ವರ್ಗಾವಣೆಯಂತಹ ಇತರ ಬ್ಯಾಂಕಿಂಗ್ ಸೇವೆಗಳನ್ನು ನಡೆಸದಂತೆಯೂ ಹೇಳಿತ್ತು.

ಇದಕ್ಕಿಂತ ಮೊದಲು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​​ಗೆ ಮತ್ತೊಂದು ಹಿನ್ನಡೆಯಾಗಿತ್ತು. ಪೇಟಿಎಂ ಅಂಗಸಂಸ್ಥೆಗೆ ಸಂಬಂಧಿಸಿದ ಕ್ಲೇಮ್​ಗಳನ್ನು ನಿರ್ವಹಿಸುವಾಗ ಎಚ್ಚರಿಕೆ ವಹಿಸುವಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಬೆಳವಣಿಗೆಯು ಇತ್ತೀಚಿನ ದಿನಗಳಲ್ಲಿ ಸರಣಿ ಸಮಸ್ಯೆಗಳನ್ನು ಎದುರಿಸುತ್ತಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನ ಖ್ಯಾತಿಗೆ ಇನ್ನಷ್ಟು ಧಕ್ಕೆ ತಂದಿದೆ. ಇಪಿಎಫ್ಒನ ಈ ಕ್ರಮವು ಬ್ಯಾಂಕಿನ ವಿಶ್ವಾಸಾರ್ಹತೆ ಬಗ್ಗೆ ಕಳವಳ ವ್ಯಕ್ತಪಡಿಸುವಂತಾಗಿದೆ.

ಫೆಬ್ರವರಿ 29ರ ನಂತರ ಗ್ರಾಹಕರ ಖಾತೆಗಳು, ವ್ಯಾಲೆಟ್​ಗಳು, ಫಾಸ್ಟ್ಯಾಗ್​ಗಳಲ್ಲಿ ಠೇವಣಿ ಅಥವಾ ಟಾಪ್-ಅಪ್​ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ಆರ್​ಬಿಐ ಜನವರಿ 31ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ದೇಶನ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ : Paytm Payments Bank: ತಪ್ಪು ತಿದ್ದಿಕೊಳ್ಳಲು ಸಮಯ ನೀಡಿದ್ರೂ ಪೇಟಿಎಂ ತಿದ್ದಿಕೊಳ್ಳಲಿಲ್ಲ ಎಂದ ಆರ್‌ಬಿಐ

ಫೆಬ್ರವರಿ 29, 2024 ರ ನಂತರ ಯಾವುದೇ ಗ್ರಾಹಕರ ಖಾತೆಗಳು, ವ್ಯಾಲೆಟ್​ಗಳು , ಫಾಸ್ಟ್​ಟ್ಯಾಗ್​ಗಳು ಮತ್ತು ಇತರ ಸಾಧನಗಳಲ್ಲಿ ಠೇವಣಿ ಅಥವಾ ಟಾಪ್-ಅಪ್​ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ಕೇಂದ್ರ ಬ್ಯಾಂಕ್ ಜನವರಿ 31 ರಂದು ನಿರ್ದೇಶನ ನೀಡಿತ್ತು.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ತನಿಖೆ ಆರಂಭಿಸಿದ ಇ.ಡಿ!

ನವದೆಹಲಿ: ಬುಧವಾರದಂದು ಜಾರಿ ನಿರ್ದೇಶನಾಲಯವು (Enforcement Directorate ED) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ವಿರುದ್ಧ ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ ಎಂದು ತಿಳಿದು ಬಂದಿದೆ .ಭಾರತೀಯ ರಿಸರ್ವ್ ಬ್ಯಾಂಕ್ (RBI) ಫೆಬ್ರವರಿ 29ರಿಂದ ಹೊಸ ಠೇವಣಿಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ ಬಳಿಕ, ಇಡಿ ಈಗ ತನಿಖೆಗೆ ಮುಂದಾಗಿದೆ.

ಕೇಂದ್ರ ತನಿಖಾ ಸಂಸ್ಥೆಯ ಈ ಕ್ರಮವು ಪೇಮೆಂಟ್ಸ್ ಬ್ಯಾಕ್‌ಗೆ ಹೊಸ ಹಿನ್ನಡೆಯನ್ನು ತಂದಿದೆ. ವಿಶೇಷವಾಗಿ ಆರ್‌ಬಿಐ ಘಟಕದ ವಿರುದ್ಧ ತನ್ನ ನಿರ್ಬಂಧದ ಯಾವುದೇ ಪರಿಶೀಲನೆಯನ್ನು ತಳ್ಳಿಹಾಕಿದ ನಂತರ. “ಸದ್ಯಕ್ಕೆ ಈ (ಪಿಪಿಬಿಎಲ್) ನಿರ್ಧಾರದ ಬಗ್ಗೆ ಯಾವುದೇ ವಿಮರ್ಶೆ ಇಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ನೀವು ನಿರ್ಧಾರದ ಮರುಪರಿಶೀಲನೆಯನ್ನು ನಿರೀಕ್ಷಿಸುತ್ತಿದ್ದರೆ, ನಿರ್ಧಾರದ ಬಗ್ಗೆ ಯಾವುದೇ ಪರಿಶೀಲನೆ ಇಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಹಿಂದೆ ಹೇಳಿದ್ದರು.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಏನಾದೂರ ಫೆಮಾ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡು ಬಂದರೆ ಜಾರಿ ನಿರ್ದೇಶನಾಲಯವು ಬ್ಯಾಂಕ್ ವಿರುದ್ದ ತನಿಖೆಯನ್ನು ಆರಂಭಿಸುವ ಸಾಧ್ಯತೆಗಳಿವೆ ಎಂದು ಕಳೆದ ವಾರವೇ ಸುದ್ದಿಯಾಗಿತ್ತು.

ಜಾರಿ ನಿರ್ದೇಶನಾಲಯವು ತನಿಖೆಯನ್ನು ಆರಂಭಿಸಿದೆ ಎಂಬ ಸುದ್ದಿಯನ್ನು ಸಂಸ್ಥೆಯು ನಿರಾಕರಿಸಿದೆ. ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರನ್ನು ಏಜೆನ್ಸಿ ತನಿಖೆ ನಡೆಸುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾರೆ. ಯಾವುದೇ ನಿಯಂತ್ರಕ ಏಜೆನ್ಸಿಯಿಂದ ಪೇಟಿಎಂ ಅಥವಾ ಅದರ ಯಾವುದೇ ಸಹವರ್ತಿಗಳು ತನಿಖೆಗೆ ಒಳಪಡುವುದಿಲ್ಲ ಎಂದು ನಾವು ಸತತವಾಗಿ ಭರವಸೆ ನೀಡಿದ್ದೇವೆ. ಹಿರಿಯ ಸರ್ಕಾರಿ ಅಧಿಕಾರಿಗಳ ಇತ್ತೀಚಿನ ಹೇಳಿಕೆಗಳಿಂದ ಈ ನಿಲುವು ಮತ್ತಷ್ಟು ಮಾನ್ಯವಾಗಿದೆ. ನಿಯಂತ್ರಕ ಮಾರ್ಗದರ್ಶನದ ಅನುಸರಣೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಮತ್ತು ಭಾರತದಾದ್ಯಂತ ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ತಲುಪಲು ನಮ್ಮ ಪ್ರಕ್ರಿಯೆಗಳನ್ನು ನಿರಂತರವಾಗಿ ಹೆಚ್ಚಿಸಲು ನಮ್ಮ ಬದ್ಧತೆ ಅಚಲವಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

Exit mobile version