Site icon Vistara News

Interest rate hike soon : ಬಡ್ಡಿ ದರದಲ್ಲಿ ಶೀಘ್ರ 1% ಹೆಚ್ಚಳದ ಸುಳಿವು ನೀಡಿದ ಆರ್‌ಬಿಐ

RBI

ಮುಂಬಯಿ: ಬೆಲೆ ಏರಿಕೆಯನ್ನು ತಗ್ಗಿಸುವ ದೃಷ್ಟಿಯಿಂದ ರಿಸರ್ವ್‌ ಬ್ಯಾಂಕ್‌ ಮತ್ತೊಮ್ಮೆ ತನ್ನ ಬಡ್ಡಿ ದರದಲ್ಲಿ ಶೇ.೧ರಷ್ಟು ದಿಢೀರ್‌ ಹೆಚ್ಚಳ ಮಾಡುವ ಸುಳಿವು ನೀಡಿದೆ.

ಆಗಸ್ಟ್‌ ಒಳಗಾಗಿ ರೆಪೊ ದರದಲ್ಲಿ ಶೇ.1ರಷ್ಟು ಏರಿಕೆಯಾಗಬಹುದು. ಇದರಿಂದಾಗಿ ಸಾಲದ ಬಡ್ಡಿ ದರಗಳು ಮತ್ತೆ ವೃದ್ಧಿಸಲಿದೆ. ಆದರೆ ಉಳಿತಾಯ ಠೇವಣಿಗಳ ಬಡ್ಡಿ ದರ ಕೂಡ ಚೇತರಿಸಲಿವೆ ಎಂದು ವರದಿಯಾಗಿದೆ.
ಆರ್‌ಬಿಐನ ಬಡ್ಡಿ ದರಗಳನ್ನು (ರೆಪೊ ಮತ್ತು ರಿವರ್ಸ್‌ ರೆಪೊ ದರ) ನಿರ್ಣಯಿಸುವ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯ ಜಯಂತ್‌ ವರ್ಮಾ ಅವರು ಸಮಿತಿಯ ಕಳೆದ ಸಭೆಯಲ್ಲಿಯೇ ಭವಿಷ್ಯದಲ್ಲಿ ಬಡ್ಡಿ ದರಗಳನ್ನು ಶೇ.1ರಷ್ಟು ಹೆಚ್ಚಿಸುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದರು. ಈ ಕುರಿತ ವಿವರಗಳನ್ನು ಆರ್‌ಬಿಐ ಪ್ರಕಟಣೆ ತಿಳಿಸಿದೆ.

ಕೋವಿಡ್‌ ಪೂರ್ವ ಮಟ್ಟಕ್ಕೆ ಬಡ್ಡಿ ದರ ಹೆಚ್ಚಳ
ಕಳೆದ ಏಪ್ರಿಲ್‌ ನಲ್ಲಿ ನಡೆದ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಆರ್‌ಬಿಐ, ದರಗಳ ಸ್ಥಿರತೆಯನ್ನು ಕಾಯ್ದುಕೊಳ್ಳಲು, ಬೆಲೆ ಏರಿಕೆಯನ್ನು ನಿಯಂತ್ರಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿತ್ತು.
ಆರ್‌ಬಿಐ ಕಳೆದ ಮೇನಲ್ಲಿ ರೆಪೊ ದರದಲ್ಲಿ ಶೇ.0.40 ಏರಿಸಿ ಶೇ.4.40ಕ್ಕೆ ನಿಗದಿಪಡಿಸಿತ್ತು. ಇದೀಗ ಮತ್ತೆ ಶೇ.1ರಷ್ಟು ಹೆಚ್ಚಿಸಿದರೆ ರೆಪೊ ದರ ಶೇ.5ರ ಗಡಿ ದಾಟಲಿದೆ. ಇದರೊಂದಿಗೆ ಕೋವಿಡ್‌ ಪೂರ್ವ ಮಟ್ಟಕ್ಕೆ ವೃದ್ಧಿಸಲಿದೆ. ಕೋವಿಡ್‌ ಬರುವುದಕ್ಕೆ ಮುನ್ನ ರೆಪೊ ದರ ಶೇ.5ಕ್ಕಿಂತ ಮೇಲಿನ ಮಟ್ಟದಲ್ಲಿತ್ತು. ಇದೀಗ ಮತ್ತೆ ಅದೇ ಬಡ್ಡಿ ದರ ಹೆಚ್ಚಳದ ಯುಗಕ್ಕೆ ಆರ್‌ಬಿಐ ಮರಳಲಿದೆ.

ಸಾಲಗಳ ಇಎಂಐನಲ್ಲಿ ಭಾರಿ ಹೆಚ್ಚಳ ನಿರೀಕ್ಷೆ
ಬ್ಯಾಂಕ್‌ಗಳು ಆರ್‌ಬಿಐನಿಂದ ಹಣ ಪಡೆದು ಸಾಲ ವಿತರಣೆಗೆ ಬಳಸುತ್ತವೆ. ಆದರೆ ಇದಕ್ಕಾಗಿ ಅವುಗಳು ಆರ್‌ಬಿಐಗೆ ಬಡ್ಡಿ ಕೊಡಬೇಕು. ಇದನ್ನು ರೆಪೊ ದರದ ಎನ್ನುತ್ತಾರೆ. ರೆಪೊ ದರವನ್ನು ಹೆಚ್ಚಿಸಿದರೆ ಬ್ಯಾಂಕ್‌ಗಳಿಗೆ ಸಾಲ ವಿತರಣೆಯ ವೆಚ್ಚ ಏರುವುದರಿಂದ ಸಾಲದ ಬಡ್ಡಿ ದರವೂ ಹೆಚ್ಚುತ್ತದೆ.
ರೆಪೊ ದರವನ್ನು ಆಧರಿಸಿದ ಗೃಹ ಸಾಲದ ಬಡ್ಡಿ ದರಗಳೂ ಏರಿಕೆಯಾಗಲಿವೆ. ಆರ್‌ಬಿಐ ಶೇ.0.40ರಷ್ಟು ಬಡ್ಡಿ ದರ ಏರಿಸಿದ್ದಾಗಲೇ ಬ್ಯಾಂಕ್‌ಗಳು ತಕ್ಷಣವೇ ಸಾಲದ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಹೀಗಾಗಿ ರೆಪೊ ದರದಲ್ಲಿ ಮತ್ತೆ 1 ಪರ್ಸೆಂಟ್‌ ಹೆಚ್ಚಳವಾದರೆ, ಸಾಲಗಾರರಿಗೆ ಇಎಂಐ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಎಂಸಿಎಲ್‌ಆರ್‌ ಆಧರಿತ ಸಾಲದ ದರಗಳೂ ವೃದ್ಧಿಸುವ ನಿರೀಕ್ಷೆ ಇದೆ. ಆಗ ವೈಯಕ್ತಿಕ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲವೂ ತುಟ್ಟಿಯಾಗಬಹುದು.
ಮಧ್ಯಮ ವರ್ಗದ ಜನತೆಗೆ ಇಎಂಐ ಹೊರೆ ಹೆಚ್ಚಳವಾದರೆ ಮಾಸಿಕ ಬಜೆಟ್‌ ವೆಚ್ಚ ಏರಿಕೆಯಾಗಲಿದೆ. ವೇತನದಾರರಿಗೆ ಗೃಹ ಸಾಲ ಸಾಮಾನ್ಯವಾಗಿದೆ. ಹೀಗಾಗಿ ಹೊಸ ಸವಾಲನ್ನು ಎದುರಿಸಲು ಸಜ್ಜಾಗಬೇಕಿಎ.

ಆರ್‌ಬಿಐ ಗವರ್ನರ್‌ ಹೇಳಿದ್ದೇನು?
ಕಚ್ಚಾ ತೈಲ ದರ ಬೆಲೆ ಏರಿಕೆ, ಅಂತಾರಾಷ್ಟ್ರೀಯ ಬೆಳವಣಿಗೆಗಳ ಪರಿಣಾಮ ಏಪ್ರಿಲ್‌ನಲ್ಲಿ ಹಣದುಬ್ಬರ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ. ಯುರೋಪ್‌ ನಲ್ಲಿ ಯುದ್ಧ ನಡೆಯುತ್ತಿದೆ. ಇದರ ಪರಿಣಾಮ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಹಣದುಬ್ಬರ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಬಡ್ಡಿ ದರ ನೀತಿಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜೂನ್‌ ತಿಂಗಳಿನ ಹಣಕಾಸು ಪರಾಮರ್ಶೆ ಸಭೆಯಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆರ್‌ ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

Exit mobile version