Site icon Vistara News

ಬೆಲೆ ಏರಿಕೆ ನಿಯಂತ್ರಿಸಲು ಆರ್‌ಬಿಐನಿಂದ ಇಂದು ಬಡ್ಡಿ ದರ ಹೆಚ್ಚಳ ಘೋಷಣೆ ನಿರೀಕ್ಷೆ

rbi governer

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇಂದು ಮತ್ತೊಂದು ಸುತ್ತಿನ ಬಡ್ಡಿ ದರ ಏರಿಕೆ ಮಾಡುವ ನಿರೀಕ್ಷೆ ಇದೆ.

ಆರ್‌ಬಿಐ ೦.೨೫%ರಿಂದ ೦.೫೦% ತನಕ ರೆಪೊ ದರವನ್ನು ಏರಿಸುವ ನಿರೀಕ್ಷೆ ಇದೆ. ಒಂದು ವೇಳೆ ಏರಿಸಿದ್ದೇ ಆದಲ್ಲಿ, ಪ್ರಸಕ್ತ ಸಾಲಿನಲ್ಲಿ ಮೂರನೇ ಸಲ ರೆಪೊ ದರ ಹೆಚ್ಚಳವಾದಂತಾಗಲಿದೆ. ಪ್ರಸ್ತುತ ರೆಪೊ ದರ ೪.೯೦% ಇದೆ. ಹೀಗಿದ್ದರೂ ಕಳೆದ ಕೆಲ ದಿನಗಳಿಂದ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿದೆ. ಜತೆಗೆ ಉದ್ದಿಮೆ ವಲಯದ ಕಚ್ಚಾ ವಸ್ತುಗಳ ದರ ದಾಖಲೆಯ ಮಟ್ಟದಿಂದ ಇಳಿಮುಖವಾಗಿವೆ. ಜುಲೈನಲ್ಲಿ ಆಟೊಮೊಬೈಲ್‌ ವ್ಯಾಪಾರ ಗಣನೀಯ ಚೇತರಿಸಿತ್ತು. ಈ ಎಲ್ಲ ಅಂಶಗಳು ಆರ್‌ಬಿಐ ನಿರ್ಧಾರದ ಮೇಲೆ ಪ್ರಭಾವ ಬೀರಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಲಗಾರರು ತಮ್ಮ ಇಎಂಐ ಮೇಲೆ ಬೀರುವ ಪ್ರಭಾವದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.

ಬ್ಲೂಮ್‌ ಬರ್ಗ್‌ ಸಮೀಕ್ಷೆಯ ಪ್ರಕಾರ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ರೆಪೊ ದರದಲ್ಲಿ ೦.೫೦% ಹೆಚ್ಚಳ ಮಾಡುವ ಸಾಧ್ಯತೆ ಇದೆ. ಅಂದರೆ ೫.೪೦%ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ೦.೩೫%ರಿಂದ ೦.೪೦% ಏರಿಕೆಯಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.

ಬ್ಲೂಮ್‌ಬರ್ಗ್‌ ನಡೆಸಿರುವ ಇತ್ತೀಚಿನ ಸಮೀಕ್ಷೆ ಪ್ರಕಾರ ಆರ್‌ಬಿಐ ತನ್ನ ರೆಪೊ ದರದಲ್ಲಿ ೦.೫೦% ಏರಿಸುವ ಸಾಧ್ಯತೆ ಇದೆ. ೨೭ ಆರ್ಥಿಕ ತಜ್ಞರ ಪೈಕಿ ೧೩ ಮಂದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ರೆಪೊ ದರ ಆಧಾರಿತ ಎಲ್ಲ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲಗಳ ಬಡ್ಡಿ ದರಗಳು ಏರಿಕೆಯಾಗಲಿವೆ. ಜತೆಗೆ ಠೇವಣಿಗಳ ಬಡ್ಡಿ ದರದಲ್ಲಿ ಅಲ್ಪ ಏರಿಕೆಯಾಗಬಹುದು.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದ ೬ ಸದಸ್ಯರ ಹಣಕಾಸು ನೀತಿ ಸಮಿತಿ ( Monetary policy committee -MPC) ಇಂದು ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. (ರೆಪೊ ದರ ಎಂದರೆ, ಬ್ಯಾಂಕ್‌ಗಳು ಸಾಲ ವಿತರಣೆಯ ಸಲುವಾಗಿ ಆರ್‌ಬಿಐನಿಂದ ಪಡೆಯುವ ಹಣದ ಮೇಲೆ ಕೊಡಬೇಕಾಗುವ ಬಡ್ಡಿ ದರ)
ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಇತ್ತೀಚೆಗೆ ಹಣದುಬ್ಬರ ಹತ್ತಿಕ್ಕಲು ಬಡ್ಡಿ ದರದಲ್ಲಿ ೦.೭೫% ಏರಿಕೆ ಮಾಡಿತ್ತು. ಒಂದು ವೇಳೆ ಭಾರತದಲ್ಲಿ ಆರ್‌ಬಿಐನ ರೆಪೊ ದರ ೫.೪೦%ಕ್ಕೆ ಏರಿದರೆ, ೨೦೧೯ರ ಆಗಸ್ಟ್‌ನಲ್ಲಿ ಇದ್ದ ದರಕ್ಕೆ ಸಮವಾಗುತ್ತದೆ.

ಹಣದುಬ್ಬರ ಇಳಿಕೆ ಸಂಭವ: ಈ ವರ್ಷದ ಆರಂಭದಿಂದಲೂ ಹಣದುಬ್ಬರ ಶೇ.೬ರ ಸುರಕ್ಷಿತ ಮಟ್ಟವನ್ನು ಮೀರಿದೆ. ಹೀಗಾಗಿ ಆರ್‌ಬಿಐ ಬೆಲೆ ಏರಿಕೆಯನ್ನು ನಿಯಂತ್ರಿಸಲು ಆದ್ಯತೆ ನೀಡುವುದು ಖಚಿತ. ಹೀಗಿದ್ದರೂ ಇತ್ತೀಚೆಗೆ ಸರಕುಗಳ ಬೆಲೆ ಇಳಿಕೆಯಾಗಿದ್ದು, ಆರ್‌ಬಿಐ ಮೇಲಿನ ಒತ್ತಡವನ್ನು ತುಸು ಕಡಿಮೆ ಮಾಡಿದೆ. ಆದರೆ ಕೆಲ ತಜ್ಞರ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಹಣದುಬ್ಬರ ೬.೭% ಮತ್ತು ೭.೨%ರ ನಡುವೆ ಇರಲಿದೆ. ದೇಶದ ಕೆಲ ಭಾಗಗಳಲ್ಲಿ ಮಳೆಯ ಕೊರತೆಯಿಂದ ಅಕ್ಕಿ ಉತ್ಪಾದನೆಯ ಮೇಲೆ ಪ್ರತಿಕೂಲ ಪ್ರಭಾವ ಬೀರುವ ಆತಂಕವೂ ಇದೆ. ಮತ್ತೊಂದು ಕಡೆ ಡಾಲರ್‌ ಎದುರು ರೂಪಾಯಿಯ ಮೌಲ್ಯ ಇಳಿಕೆ ಬಗ್ಗೆಯೂ ಆರ್‌ಬಿಐ ನಿಗಾ ವಹಿಸುತ್ತಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಬಡ್ಡಿ ದರ ಏರಿಕೆ ಸನ್ನಿಹಿತವಾಗಿದೆ.

ಅಮೆರಿಕದಲ್ಲಿ ಮತ್ತೆ ಬಡ್ಡಿ ದರ ಏರಿಕೆ?: ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಮುಂದಿನ ತಿಂಗಳು ಮತ್ತೆ ಬಡ್ಡಿ ದರವನ್ನು ಏರಿಸುವ ಸಾಧ್ಯತೆ ಇದೆ.

Exit mobile version