Site icon Vistara News

ಆರ್‌ಬಿಐನಿಂದ ಸಾಲದ ಬಡ್ಡಿ ದರ 0.50% ಏರಿಕೆ, ಹಣದುಬ್ಬರ 6%ಕ್ಕೆ ಇಳಿಕೆ ನಿರೀಕ್ಷೆ

rbi governer

ಆರ್‌ಬಿಐ ಹಣಕಾಸು ನೀತಿಯ ಮುಖ್ಯಾಂಶಗಳು

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ತನ್ನ ಸಾಲದ ಬಡ್ಡಿ ದರದಲ್ಲಿ 0.50% ಏರಿಕೆ ಮಾಡಿದ್ದು, 4.90%ಕ್ಕೆ ಜಿಗಿದಿದೆ. ಆರ್‌ಬಿಐ ಇಂದು ಬಡ್ಡಿ ದರ ಏರಿಕೆ ಮಾಡುವುದು ನಿರೀಕ್ಷಿತವಾಗಿತ್ತು.

ಆರ್‌ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಬಡ್ಡಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಆರ್‌ ಬಿಐ ಬಡ್ಡಿ ದರ ಇಳಿಕೆ ಹಾಗೂ ಸರಕಾರದ ವಿತ್ತೀಯ ನಿಯಂತ್ರಣ ಕ್ರಮಗಳಿಂದ ಹಣದುಬ್ಬರ ಇಳಿಕೆಯಾಗಲಿದೆ. ಹಣದುಬ್ಬರ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ.7.4, ಅಕ್ಟೋಬರ್-ಡಿಸೆಂಬರ್‌ ನಲ್ಲಿ ಶೇ.6.2 ಹಾಗೂ ಜನವರಿ-ಮಾರ್ಚ್‌ನಲ್ಲಿ ಶೇ.5.8ಕ್ಕೆ ಇಳಿಕೆಯಾಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ.

ಆರ್‌ ಬಿಐ ಬಡ್ಡಿ ದರ ಏರಿಸುತ್ತಿದ್ದಂತೆ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 160 ಅಂಕ ಕುಸಿದು ಬಳಿಕ ಚೇತರಿಸಿತು.‌

ಇದನ್ನೂ ಓದಿ:Explainer: ಬೆಲೆ ಏರಿಕೆಗೆ ಬ್ರೇಕ್‌ ಹಾಕಲು ಬಡ್ಡಿ ದರ ಹೆಚ್ಚಿಸಿದ ಆರ್‌ಬಿಐ, ಸಾಲಗಾರರಿಗೆ EMI ಹೊರೆ

ರೆಪೊ ದರ ಏರಿಕೆಯ ಪರಿಣಾಮ ಗೃಹಸಾಲ, ವಾಹನ, ವೈಯಕ್ತಿಕ ಮತ್ತು ಕಾರ್ಪೊರೇಟ್‌ ಸಾಲಗಳ ಬಡ್ಡಿ ದರಗಳಲ್ಲಿ ಏರಿಕೆಯಾಗಲಿದೆ. ಇದೇ ವೇಳೆ ಬ್ಯಾಂಕ್‌ ಗಳಲ್ಲಿ ಠೇವಣಿ ಮೇಲಿನ ಬಡ್ಡಿ ದರಗಳಲ್ಲಿ ಅಲ್ಪ ಏರಿಕೆ ನಿರೀಕ್ಷಿಸಲಾಗಿದೆ.

ಆರ್‌ಬಿಐ 2022-23ರಲ್ಲಿ ಹಣದುಬ್ಬರದ ಮುನ್ನೋಟವನ್ನು ಶೇ.6.7ಕ್ಕೆ ಅಂದಾಜಿಸಿದೆ. ಈ ಹಿಂದೆ ಶೇ. 5.7ಕ್ಕೆ ಅಂದಾಜಿಸಿತ್ತು.

ಕಚ್ಚಾ ತೈಲ ದರ, ಟೊಮೆಟೊ ಬೆಲೆ ಏರಿಕೆ ಹಣದುಬ್ಬರ ಏರಿಕೆಗೆ ಪ್ರಭಾವ ಬೀರಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ. ಆರ್‌ ಬಿಐ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು 2022-23ರ ಸಾಲಿಗೆ 7.2%ಕ್ಕೆ ಅಂದಾಜಿಸಿದೆ. ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಏರಿದ್ದು, ಈ ಸವಾಲಿನ ಪರಿಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಚೇತರಿಸುತ್ತಿದೆ ಎಂದು ಗವರ್ನರ್‌ ತಿಳಿಸಿದರು.

ಇದನ್ನೂ ಓದಿ: RBI rate hike: ನಿಮ್ಮ ಸಾಲಗಳ EMI ಎಷ್ಟು ಏರಿಕೆಯಾಗಲಿದೆ ಗೊತ್ತೇ?

Exit mobile version