Site icon Vistara News

RBI ಬಡ್ಡಿ ದರ ನಾಳೆ 0.40% ಏರಿಕೆ ನಿರೀಕ್ಷೆ, ಸಾಲದ ಇಎಂಐ ಮತ್ತಷ್ಟು ಹೆಚ್ಚಳ ಸನ್ನಿಹಿತ

RBI imposed huge fine on ICICI Bank, Kotak Mahindra Bank

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಣಕಾಸು ನೀತಿ ಪರಾಮರ್ಶೆ ಸಮಿತಿ ತನ್ನ ಸಭೆ ಆರಂಭಿಸಿದ್ದು, ಬುಧವಾರ (ಜೂನ್‌ 8) ಬಡ್ಡಿ ದರದಲ್ಲಿ 0.40% ಏರಿಕೆ ಮಾಡುವ ನಿರೀಕ್ಷೆ ಇದೆ.

ಹಣದುಬ್ಬರವನ್ನು ನಿಯಂತ್ರಣ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಆರ್‌ಬಿಐ ತನ್ನ ರೆಪೊ ದರವನ್ನು 4.8%ಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ಬ್ಲೂಮ್‌ ಬರ್ಗ್‌ ಸಮೀಕ್ಷೆ ತಿಳಿಸಿದೆ. 37 ಆರ್ಥಿಕ ತಜ್ಞರ ಸಮೀಕ್ಷೆ ನಡೆಸಿ ಈ ವರದಿ ತಯಾರಿಸಿದೆ.

ಕಳೆದ ಮೇನಲ್ಲಿ ಆರ್‌ಬಿಐ 0.40% ರೆಪೊ ದರ ಏರಿಸಿತ್ತು. ಹಣದುಬ್ಬರ ಆರ್‌ ಬಿಐನ ಸುರಕ್ಷತಾ ಮಟ್ಟವಾದ 2%-6% ಕ್ಕಿಂತ ಮೇಲಿನ ಅಪಾಯಕಾರಿ ಮಟ್ಟದಲ್ಲಿ ಇದೆ. ಸಗಟು ಹಣದುಬಬರ ಕಳೆದ ಮೂರು ದಶಕದಲ್ಲೇ ಗರಿಷ್ಠ ಪ್ರಮಾಣದಲ್ಲಿದೆ. ಹೀಗಾಗಿ ರೆಪೊ ದರವನ್ನು ಮತ್ತಷ್ಟು ಏರಿಸುವ ಸುಳಿವು ನೀಡಿತ್ತು.

ಸದ್ಯದ ಹಣದುಬ್ಬರದ ಏರುಗತಿಯನ್ನು ಗಮನಿಸಿದರೆ ಆರ್‌ಬಿಐ ತನ್ನ ರೆಪೊ ದರ ಏರಿಸುವುದು ಖಚಿತ ಎಂದು ಡ್ಯೂಯಿಷ್‌ ಬ್ಯಾಂಕ್‌ನ ಎಕನಾಮಿಸ್ಟ್‌ ಕೌಶಿಕ್‌ ದಾಸ್‌ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೂ, ಸರಕಾರ ಬೆಲೆಗಳ ನಿಯಂತ್ರಣಕ್ಕೆ ಅಗತ್ಯ ನೀತಿಗಳನ್ನು ಅಳವಡಿಸುತ್ತಿದೆ ಎಂದಿದ್ದಾರೆ.

ಆರ್ಥಿಕ ತಜ್ಞರ ಸ್ವಾಗತ

ರಿಸರ್ವ್‌ ಬ್ಯಾಂಕ್‌ ಬಡ್ಡಿ ದರವನ್ನು ಏರಿಸುವುದು ಹಣದುಬ್ಬರದ ನಿಯಂತ್ರಣದ ದೃಷ್ಟಿಯಿಂದ ಸ್ವಗತಾರ್ಹ ನಡೆಯಾಗಿದೆ ಎಂದು ಬಹುತೇಕ ಆರ್ಥಿಕ ತಜ್ಞರು ಸ್ವಾಗತಿಸಿದ್ದಾರೆ. ಶೇ.0.50ರಷ್ಟು ಬಡ್ಡಿ ದರ ಏರಿಸುವುದು ಸೂಕ್ತ ಎಂದು ಎಸ್‌ಬಿಐ ಗ್ರೂಪ್‌ ಎಕನಾಮಿಸ್ಟ್‌ ಸೌಮ್ಯಕಾಂತಿ ಘೋಷ್‌ ತಿಳಿಸಿದ್ದಾರೆ.

ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ ಬಿಐನಿಂದ ಪಡೆಯುವ ಹಣದ ಮೇಲಿನ ಬಡ್ಡಿ ದರ. ಆರ್‌ ಬಿಐನಿಂದ ಪಡೆಯುವ ಈ ಹಣವನ್ನು ಬ್ಯಾಂಕ್‌ ಗಳು ಗ್ರಾಹಕರಿಗೆ ಸಾಲ ವಿತರಣೆಗೆ ಬಳಸುತ್ತವೆ. ಆರ್‌ ಬಿಐ ರೆಪೊ ದರ ಹೆಚ್ಚಿಸಿದರೆ ಬ್ಯಾಂಕ್‌ ಗಳಿಗೆ ಸಾಲ ವಿತರಣೆಯ ವೆಚ್ಚ ಹೆಚ್ಚುತ್ತದೆ. ಅದನ್ನು ಬಡ್ಡಿ ದರ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುತ್ತವೆ. ಇದೇ ರೀತಿ ರೆಪೊ ದರ ಇಳಿದರೆ ಸಾಲ ವಿತರಣೆಯ ವೆಚ್ಚ ಇಳಿಯುತ್ತದೆ. ಆಗ ಬಡ್ಡಿ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕೂಡ ಬ್ಯಾಂಕ್‌ ಗಳಿಗೆ ಅವಕಾಶ ಉಂಟಾಗುತ್ತದೆ.

HDFC ಬ್ಯಾಂಕ್‌ ಸಾಲದ ಬಡ್ಡಿ ಹೆಚ್ಚಳ

ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಎಂಸಿಎಲ್‌ಆರ್‌ ಆಧಾರಿತ ಸಾಲಗಳ ಬಡ್ಡಿ ದರದಲ್ಲಿ 0.35% ಏರಿಸಿದೆ. ಇದರಿಂದ ಬ್ಯಾಂಕಿನ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಮತ್ತು ಕಾರ್ಪೊರೇಟ್‌ ಸಾಲಗಳ ಇಎಂಐನಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

Exit mobile version