Site icon Vistara News

Bank Cheque: ಬ್ಯಾಂಕ್‌ಗೆ ಚೆಕ್‌ ಹಾಕಿದ ಕೆಲವೇ ಗಂಟೆಗಳಲ್ಲಿ ಇನ್ನು ಖಾತೆಗೆ ಜಮಾ; ಆರ್‌ಬಿಐ ಮಹತ್ವದ ಘೋಷಣೆ

Bank Cheque

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸು ನೀತಿ ಸಭೆ (RBI Monetary Policy Meeting) ನಡೆದಿದ್ದು, ರೆಪೋ ದರವನ್ನು ಸತತ 9ನೇ ಬಾರಿಗೆ ಯಥಾಸ್ಥಿತಿ ಮುಂದುವರಿಸಲಾಗಿದೆ. ಇನ್ನು, ರೆಪೋ ದರದ (Repo Rate) ಜತೆಗೆ ಆರ್‌ಬಿಐ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡಿದೆ. ಅದರಲ್ಲೂ, ಬ್ಯಾಂಕ್‌ಗಳಿಗೆ ಚೆಕ್‌ ಹಾಕಿದ ಕೆಲವೇ ಗಂಟೆಗಳಲ್ಲಿ ಮೊತ್ತವು ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ ಎಂಬ ಘೋಷಣೆಯು ಜನರಿಗೆ ತುಂಬ ಅನುಕೂಲವಾಗಲಿದೆ.

ಮೊಬೈಲ್‌ನಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದು, ಬ್ಯಾಂಕ್‌ಗಳಲ್ಲಿ ಆರ್‌ಟಿಜಿಎಸ್‌, ಎನ್‌ಇಎಫ್‌ಟಿ (ನೆಫ್ಟ್)‌ ಮೂಲಕ ಹಣ ವರ್ಗಾವಣೆ ಮಾಡುವ ಕಾಲದಲ್ಲಿ ಬ್ಯಾಂಕ್‌ನಲ್ಲಿ ಚೆಕ್‌ ಹಾಕಿದರೆ, 2-3 ದಿನ ಬೇಕಾಗುತ್ತಿತ್ತು. ವಾರಾಂತ್ಯ ಅಥವಾ ರಜೆ ಇದ್ದರೆ ಚೆಕ್‌ನ ಮೊತ್ತವು ಜಮೆಯಾಗಲು 4-5 ದಿನ ಬೇಕಾಗುತ್ತಿತ್ತು. ಈಗ ಬ್ಯಾಂಕ್‌ಗೆ ನೀಡಿದ ಕೆಲವೇ ಗಂಟೆಗಳಲ್ಲಿ ಮೊತ್ತವು ಇನ್ನು ಮುಂದೆ ಖಾತೆಗೆ ಜಮೆಯಾಗಲಿದೆ. ಇದರಿಂದ ಉದ್ಯಮಿಗಳು ಸೇರಿ ಎಲ್ಲರಿಗೂ ಅನುಕೂಲವಾಗಲಿದೆ.

ರೆಪೋ ದರದ ಕುರಿತು ಶಕ್ತಿಕಾಂತ ದಾಸ್‌ ಮಾಹಿತಿ ನೀಡಿದರು. ʼʼಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಎಂಪಿಸಿ ಸಭೆಯಲ್ಲಿ ಆರು ಸದಸ್ಯರಲ್ಲಿ ನಾಲ್ವರು ಬಡ್ಡಿದರ ಯಥಾಸ್ಥಿತಿ ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆʼʼ ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು.

ಹಣದುಬ್ಬರ ನಿಯಂತ್ರಣದ ಗುರಿ

ಹಣದುಬ್ಬರವನ್ನು ನಿಯಂತ್ರಿಸುವುದೇ ಆರ್‌ಬಿಐಯ ಹಣಕಾಸು ನೀತಿಯ ಪ್ರಮುಖ ಗುರಿ. ಪ್ರಸ್ತುತ ಹಣದುಬ್ಬರ ದರ ಆರ್‌ಬಿಐಯ ಗುರಿಯಾದ ಶೇ. 4ಕ್ಕಿಂತ ಹೆಚ್ಚಾಗಿದೆ. ರೆಪೋ ದರವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಸ್ತುತ ದರವನ್ನು ಕಾಯ್ದುಕೊಳ್ಳುವುದು ಹಣದುಬ್ಬರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಆರ್‌ಬಿಐಯ ಅಭಿಮತ. ʼʼರೆಪೋ ದರ ಕಡಿತವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಬಹುದಾದರೂ ಆರ್‌ಬಿಐ ಈ ಹಂತದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಆದ್ಯತೆ ನೀಡುತ್ತಿದೆʼʼ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Repo Rate: ಗೃಹಸಾಲದ ಇಎಂಐ ಭಾರ ಇಳಿಕೆ ಇಲ್ಲ; ರೆಪೋ ದರ ಯಥಾಸ್ಥಿತಿ

Exit mobile version