ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಲಗಾರರಿಗೆ ಸಿಹಿ ಸುದ್ದಿ ನೀಡಿದೆ. ಮೂರನೇ ದ್ವೈಮಾಸಿಕ ಸಭೆಯಲ್ಲಿ (RBI Monetary Policy) ಕೂಡ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ತೀರ್ಮಾನಿಸಿದೆ.. ಸದ್ಯ ರೆಪೋ ದರವು ಶೇ.6.5 ಇದ್ದು, ಇದನ್ನೇ ಮುಂದುವರಿಸಲು ಆರ್‌ಬಿಐ ತೀರ್ಮಾನಿಸಿದೆ. ಇದರೊಂದಿಗೆ ರೆಪೋ ದರ ಶೇ.6.5ರೊಂದಿಗೆ ಮುಂದುವರಿದರೆ, ರಿವರ್ಸ್ ರೆಪೋ ದರವೂ ಶೇ.3.35ರಷ್ಟೇ ಇರಲಿದೆ.
ಆರ್‌ಬಿಐ ಸಭೆ ಕುರಿತು ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, “ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ” ಎಂದು ಮಾಹಿತಿ ನೀಡಿದರು. ಇದರಿಂದಾಗಿ ಗೃಹ ಸಾಲ ಸೇರಿ ಯಾವುದೇ ಸಾಲಗಾರರಿಗೆ ಬಡ್ಡಿದರದಲ್ಲಿ ಏರಿಕೆಯಾಗದ ಕಾರಣ ಅವರ ಜೇಬಿಗೆ ಹೊರೆಯಾಗುವುದಿಲ್ಲ.
ಶಕ್ತಿಕಾಂತ ದಾಸ್ ಮಾಹಿತಿ
ಸತತ 3ನೇ ಬಾರಿಗೆ ಯಥಾಸ್ಥಿತಿ
ಪ್ರಸಕ್ತ ವರ್ಷದ ಜೂನ್ ಹಾಗೂ ಏಪ್ರಿಲ್‌ನಲ್ಲಿ ನಡೆದ ದ್ವೈಮಾಸಿಕ ಸಭೆಗಳಲ್ಲಿ ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ, ಶೇ.6.5ರಷ್ಟು ರೆಪೋ ದರವನ್ನೇ ಇರಿಸಲಾಗಿತ್ತು. ಆದರೆ, ಹಣದುಬ್ಬರ ನಿಯಂತ್ರಣದ ದೃಷ್ಟಿಯಿಂದ 2023ರ ಫೆಬ್ರವರಿಯಲ್ಲಿ 25 ಹಾಗೂ 2022ರ ಡಿಸೆಂಬರ್‌ನಲ್ಲಿ 35 ಬೇಸಿಕ್ ಪಾಯಿಂಟ್‌ಗಳನ್ನು ಏರಿಕೆ ಮಾಡಿತ್ತು.
ಹಣದುಬ್ಬರ ಬಗ್ಗೆ ಹೇಳಿದ್ದೇನು?
ದೇಶದಲ್ಲಿ ಹಣದುಬ್ಬರದ ಏರಿಕೆ ಕುರಿತು ಆರ್‌ಬಿಐ ಮುನ್ಸೂಚನೆ ನೀಡಿದೆ. ಜೂನ್ ಹಾಗೂ ಜುಲೈನಲ್ಲಿ ಟೊಮ್ಯಾಟೊ ಸೇರಿ ಹಲವು ತರಕಾರಿ, ಬೇಳೆ-ಕಾಳುಗಳ ಬೆಲೆ ಏರಿಕೆಯಾದ ಕಾರಣ ಆಗಸ್ಟ್, ಸೆಪ್ಟೆಂಬರ್‌ನಲ್ಲೂ ಹಣದುಬ್ಬರ ಏರಿಕೆಯಾಗಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. 2023-24ನೇ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ.5.4ಕ್ಕೆ ಏರಿಕೆಯಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಜೂನ್‌ನಲ್ಲಿ ಇದು ಶೇ.5.1ರಷ್ಟು ಆಗಲಿದೆ ಎಂದು ಅಂದಾಜಿಸಲಾಗಿತ್ತು. ಜೂನ್ ವರದಿ ಪ್ರಕಾರ ದೇಶದ ಹಣದುಬ್ಬರ ಪ್ರಮಾಣ ಶೇ.4.81 ಇತ್ತು.
ಇದನ್ನೂ ಓದಿ: 2000 Notes Withdrawan : ಬ್ಯಾಂಕ್‌ಗಳಿಗೆ 76% ನೋಟು ವಾಪಸ್: ಆರ್‌ಬಿಐ
ಭಾರತದ ಜಿಡಿಪಿ ಬೆಳವಣಿಗೆಯು ಮೊದಲನೇ ತ್ರೈಮಾಸಿಕದಲ್ಲಿ ಶೇ.8, ಎರಡನೇ ತ್ರೈಮಾಸಿಕದಲ್ಲಿ ಶೇ.6.5, ಮೂರನೇ ತ್ರೈಮಾಸಿಕದಲ್ಲಿ ಶೇ.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 5.7 ಇರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. 2023-24ನೇ ಹಣಕಾಸು ಸಾಲಿಗೆ ಭಾರತೀಯ ರಿಸರ್ವ್ ಬ್ಯಾಂಕ್, ದೇಶದ ಜಿಡಿಪಿ ಬೆಳವಣಿಗೆಯನ್ನು ಶೇ.6.5ಕ್ಕೆ ನಿಗದಿಪಡಿಸಿದೆ.