ಮುಂಬಯಿ: ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸದೃಢವಾಗಿದ್ದು ಅದಾನಿ ಗ್ರೂಪ್‌ನಂಥ ಒಬ್ಬ ಗ್ರಾಹಕರಿಂದಾಗಿ ಇಡೀ ವ್ಯವಸ್ಥೆಗೆ ಅಪಾಯ ಉಂಟಾಗುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. (RBI MPC Meet 2023) ಅದಾನಿ ಗ್ರೂಪ್‌ಗೆ ಭಾರತೀಯ ಬ್ಯಾಂಕ್‌ಗಳು ಕೊಟ್ಟಿರುವ ಸಾಲ ಮತ್ತು ರಿಸ್ಕ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವೈಯಕ್ತಿಕವಾಗಿ ಒಬ್ಬ ಗ್ರಾಹಕರಿಂದ ಬ್ಯಾಂಕಿಂಗ್ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ. ಬ್ಯಾಂಕ್‌ಗಳು ಕಂಪನಿಯ ಪ್ರಾಜೆಕ್ಟ್ ಅನ್ನು ಆಧರಿಸಿ ಸಾಲ ನೀಡುತ್ತವೆಯೇ ಹೊರತು ಕಂಪನಿಯ ಮಾರುಕಟ್ಟೆ ಬಂಡವಾಳವನ್ನು ಆಧರಿಸಿ ಅಲ್ಲ ಎಂದು ಶಕ್ತಿಕಾಂತ ದಾಸ್ ವಿವರಿಸಿದರು.
ಭಾರತೀಯ ಬ್ಯಾಂಕ್‌ಗಳು ಸಾಲ ವಿತರಿಸುವ ಪದ್ಧತಿಯಲ್ಲಿ ಗಣನೀಯ ಸುಧಾರಣೆಯಾಗಿದೆ. ಭಾರತೀಯ ಬ್ಯಾಂಕ್‌ಗಳು ಷೇರುಗಳನ್ನು ಅಡಮಾನವನ್ನು ಇಟ್ಟು ಸಾಲ ಕೊಡುವ ಪರಿಪಾಠವನ್ನು ಕಡಿಮೆ ಮಾಡಿವೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಮಹೇಶ್ ಕುಮಾರ್ ಜೈನ್ ಹೇಳಿದ್ದಾರೆ.
ಬ್ಯಾಂಕ್‌ಗಳು ಅದಾನಿ ಗ್ರೂಪ್‌ಗೆ ಕೊಟ್ಟಿರುವ ಸಾಲದ ಪ್ರಮಾಣ ಅವುಗಳು ವಿತರಿಸಿರುವ ಒಟ್ಟು ಸಾಲದಲ್ಲಿ ಶೇ.1ಕ್ಕೂ ಕಡಿಮೆಯಾಗಿದೆ ಎಂದು ಮೂಡೀಸ್ ಇತ್ತೀಚಿನ ವರದಿಯಲ್ಲಿ ತಿಳಿಸಿತ್ತು.