ಮುಂಬಯಿ: ಕಳೆದ ವರ್ಷ ಮೇಯಿಂದ ಇಲ್ಲಿಯವರೆಗೆ ಆರ್‌ಬಿಐ ಒಟ್ಟು 6 ಸಲ ರೆಪೊ ದರವನ್ನು ಏರಿಸಿದೆ. ಈ ವರ್ಷ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ 5.2% ಇಳಿಕೆಯಾಗಿದೆ. ಆರ್‌ಬಿಐ ಪ್ರಕಾರ ಹಣದುಬ್ಬರ 6% ಕ್ಕಿಂತ (RBI MPC Meet 2023) ಕೆಳಕ್ಕಿಳಿದರೆ ಸುರಕ್ಷತೆಯ ಮಟ್ಟದಲ್ಲಿದೆ ಎಂದರ್ಥ. ಹೀಗಾಗಿ ಬಹುಶಃ ಆರ್‌ಬಿಐ ಕೊನೆಯ ಸಲ ರೆಪೊ ದರವನ್ನು ಈ ಸಲ ಏರಿಸಬಹುದು. ಮುಂದಿನ ದಿನಗಳಲ್ಲಿ ರೆಪೊ ದರ ಇಳಿಸುವ ಇಂಗಿತ ವ್ಯಕ್ತಪಡಿಸಬಹುದು ಎಂದೇ ಭಾವಿಸಿದ್ದರು. ಅಚ್ಚರಿ ಎಂಬಂತೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮೂಲ ಹಣದುಬ್ಬರ (core inflation) ಅಂದರೆ ಆಹಾರ ಮತ್ತು ಇಂಧನ ಹೊರತುಪಡಿಸಿದ ಹಣದುಬ್ಬರದ ಪ್ರಮಾಣ ಈಗಲೂ ಉನ್ನತ ಮಟ್ಟದಲ್ಲಿ ಇರುವುದರಿಂದ, ಮುಂದೆಯೂ ರೆಪೊ ದರವನ್ನು ಏರಿಸಬೇಕಾಗಬಹುದು ಎಂಬ ಸುಳಿವನ್ನು ನೀಡಿದ್ದಾರೆ.
ರೆಪೊ ದರ ಈಗಲೂ ಕೋವಿಡ್ ಪೂರ್ವಮಟ್ಟಕ್ಕಿಂತ ಕೆಳಗಿದೆ. ಮತ್ತೊಂದು ಕಡೆ ಮೂಲ ಹಣದುಬ್ಬರ ಏರುಗತಿಯಲ್ಲಿದೆ. ವ್ಯವಸ್ಥೆಯಲ್ಲಿ ಹೆಚ್ಚುವರಿ ನಗದು ಚಲಾವಣೆಯಲ್ಲಿದೆ. ಹೀಗಾಗಿ ಹಣಕಾಸು ನೀತಿಯನ್ನು ಮತ್ತಷ್ಟು ಬಿಗಿಗೊಳಿಸಿ, ವ್ಯವಸ್ಥೆಯಲ್ಲಿರುವ ಹೆಚ್ಚುವರಿ ನಗದನ್ನು ಹೀರಿಕೊಳ್ಳಬೇಕಾಗಿ ಬರಬಹುದು ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದು, ಅಗತ್ಯ ಬಿದ್ದರೆ ಬಡ್ಡಿ ದರವನ್ನು ಮತ್ತಷ್ಟು ಏರಿಸುವ ಸುಳಿವನ್ನೂ ನೀಡಿದ್ದಾರೆ.
6.4% ಜಿಡಿಪಿ: 2023-24ರಲ್ಲಿ ಜಿಡಿಪಿಯ ಪ್ರಮಾಣ 6.4%ಕ್ಕೆ ಏರಿಕೆಯಾಗಬಹುದು ಎಂದು ಆರ್‌ಬಿಐ ತಿಳಿಸಿದೆ. ಹಣದುಬ್ಬರ 2023-24ರಲ್ಲಿ 5.3%ಕ್ಕೆ ಇಳಿಕೆಯಾಗಲಿದೆ ಎಂದೂ ತಿಳಿಸಿದೆ. ಏಪ್ರಿಲ್ 3-6ಕ್ಕೆ ಹಣಕಾಸು ಸಮಿತಿಯ ಸಭೆ ನಡೆಯಲಿದೆ.