ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 3, 5 ಮತ್ತು 6ರಂದು ಹಣಕಾಸು ನೀತಿ ಸಮಿತಿಯ (monetary policy committee) ಸಭೆ ನಡೆಸಲಿದೆ. ಏಪ್ರಿಲ್ 6ರಂದು ಬಡ್ಡಿ ದರ ಪರಿಷ್ಕರಣೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ. 2023-24 ಸಾಲಿನ ಮೊದಲ ಎಂಪಿಸಿ ಸಭೆ ಇದಾಗಿದ್ದು, ರೆಪೊ ದರದಲ್ಲಿ 0.25% ಏರಿಕೆಯಾಗುವ ಸಾಧ್ಯತೆ ಇದೆ. ಈಗ ರೆಪೊ ದರ 6.50% ಇದ್ದು, 6.75%ಕ್ಕೆ ವೃದ್ಧಿಸುವ ಸಾಧ್ಯತೆ ಇದೆ.
ಹಣದುಬ್ಬರ ಆರ್‌ಬಿಐನ ಸುರಕ್ಷತೆಯ ಮಟ್ಟಕ್ಕಿಂತ (ಶೇ.6) ಮೇಲೆ ಇರುವುದು ಹಾಗೂ ಅಮೆರಿಕ ಮತ್ತು ಯುರೋಪ್‌ನಲ್ಲಿ ಬಡ್ಡಿ ದರ ಏರುಗತಿಯಲ್ಲಿ (Interest rate hike) ಇರುವುದರಿಂದ ಆರ್‌ಬಿಐ ಕೂಡ ರೆಪೊ ದರವನ್ನು ಏರಿಸುವ ಸಾಧ್ಯತೆ ಇದೆ.
ಹಣಕಾಸು ನೀತಿ ಸಮಿತಿಯು ದೇಶೀಯ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಮತ್ತು ಯುರೋಪಿನಲ್ಲಿ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ತೆಗೆದುಕೊಳ್ಳುವ ನೀತಿಗಳು ಪ್ರಭಾವ ಬೀರುವ ನಿರೀಕ್ಷೆ ಇದೆ. ಈ ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿ ದರ ಏರಿಸಿದಾಗ ಭಾರತದಲ್ಲಿ ಆರ್‌ಬಿಐ ಕೂಡ ಏರಿಸುವಂತೆ ಒತ್ತಡ ಸೃಷ್ಟಿಯಾಗುತ್ತದೆ. ಏಕೆಂದರೆ ವಿದೇಶಿ ಹೂಡಿಕೆಯ ಹರಿವಿನ ಮೇಲೆ ಜಾಗತಿಕ ಬಡ್ಡಿ ದರ ನಿರ್ಣಾಯವಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹೆಚ್ಚಿನ ಬಡ್ಡಿ ದರವನ್ನು ಭಾರತ ನೀಡಬೇಕಾಗುತ್ತದೆ. ತಪ್ಪಿದರೆ ವಿದೇಶಿ ಹೂಡಿಕೆ ಹೊರ ಹೋಗುವ ಅಪಾಯ ಕೂಡ ಹೆಚ್ಚುತ್ತದೆ. ಅದೇ ವೇಳೆ ಭಾರತದಲ್ಲಿ ಹಣದುಬ್ಬರ ನಿಯಂತ್ರಿಸುವುದು ಕೂಡ ಮುಖ್ಯವಾಗಿರುವುದರಿಂದ ಬಡ್ಡಿ ದರದಲ್ಲಿ 0.25% ಏರಿಕೆ ನಿರೀಕ್ಷಿಸಲಾಗಿದೆ.
ಆರ್‌ಬಿಐ 2022ರ ಮೇ ನಂತರ ಬಡ್ಡಿ ದರವನ್ನು ಏರಿಸಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಜಿಗಿದಿದೆ. ಇದನ್ನು ಹತ್ತಿಕ್ಕಲು ನಾನಾ ದೇಶಗಳು ಬಡ್ಡಿ ದರವನ್ನು ಏರಿಸಿವೆ. ಭಾರತವೂ ಹೊರತಾಗಿಲ್ಲ. ಗ್ರಾಹಕ ದರ ಆಧರಿತ ಹಣದುಬ್ಬರ (consumer price index) ಜನವರಿಯಲ್ಲಿ 6.52%ಕ್ಕೆ ಹಾಗೂ ಫೆಬ್ರವರಿಯಲ್ಲಿ 6.44%ಕ್ಕೆ ಏರಿಕೆಯಾಗಿದೆ.
ಪರಿಣಾಮವೇನು?
ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ನೀಡುವ ಬಡ್ಡಿ ದರ. ಇದು ಏರುವುದರಿಂದ ಬ್ಯಾಂಕ್‌ಗಳಿಗೆ ಸಾಲದ ವಿತರಣೆಗೆ ತಗಲುವ ವೆಚ್ ಹೆಚ್ಚಳವಾಗುತ್ತದೆ. ಇದಕ್ಕಾಗಿ ಸಾಲಗಾರರಿಗೆ ಬಡ್ಡಿ ದರ ಏರಿಸುತ್ತವೆ. ಗೃಹ ಸಾಲದ ಇಎಂಐ ಹೆಚ್ಚುತ್ತದೆ. ರೆಪೊ ದರ ಆಧರಿತ ಎಲ್ಲ ಸಾಲಗಳೂ ದುಬಾರಿಯಾಗಲಿದೆ. ಮತ್ತೊಂದು ಕಡೆ ಹಣ ಹೊಂದಿಸಲು ಬ್ಯಾಂಕ್‌ಗಳು ಠೇವಣಿದಾರರಿಗೆ ಬಡ್ಡಿ ಏರಿಸಿ ಆಕರ್ಷಿಸುತ್ತವೆ. ಹೀಗಾಗಿ ಠೇವಣಿದಾರರಿಗೆ ಬಡ್ಡಿ ಹೆಚ್ಚಳ ಸಿಗಲಿದೆ.