Site icon Vistara News

RBI New rules: ಮನೆ ಸಾಲದ ಇಎಂಐ ಏರಿಕೆ ಖಚಿತ! ಆರ್‌ಬಿಐ ಹೊಸ ರೂಲ್ ಪ್ರಭಾವ

home loan

ಹೊಸದಿಲ್ಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (reserve bank of india – RBI) ನೂತನ ಸಾಲ ನಿಯಮಾವಳಿಯನ್ನು (RBI New rules) ಜಾರಿ ಮಾಡಲಿದ್ದು, ಇದರಿಂದ ಸಾಲ ಪಡೆಯುವವರಿಗೆ ಇನ್ನಷ್ಟು ಬರೆ ಬೀಳಲಿದೆ. ಗೃಹ ಸಾಲದ ಇಎಂಐಗಳು (home loan EMI) ಜಾಸ್ತಿಯಾಗಲಿವೆ; ಕೆಲವರು ಮನೆ ಸಾಲ ಪಡೆಯುವ ಅರ್ಹತೆಯನ್ನೇ ಕಳೆದುಕೊಳ್ಳಬಹುದು.

ಆರ್‌ಬಿಐ ಸಾಲ ಗ್ರಾಹಕರಿಗೆ ತಮ್ಮ ಸಾಲಗಳನ್ನು ಫ್ಲೋಟಿಂಗ್‌ನಿಂದ (floating rate of interest) ಫಿಕ್ಸ್‌ಡ್‌ ಬಡ್ಡಿ ದರಗಳಿಗೆ (fixed rate of interest) ಬದಲಾಯಿಸುವ ಸೌಲಭ್ಯವನ್ನು ನೀಡಿದೆ.ಇದಕ್ಕೆ ತಗುಲುವ ವೆಚ್ಚವನ್ನು ಬ್ಯಾಂಕ್‌ಗಳು ಸ್ಯಾಂಕ್ಷನ್‌ ಪತ್ರಗಳಲ್ಲಿ ನಮೂದಿಸಬೇಕಿದೆ. ಬಡ್ಡಿ ದರಗಳ ಏರಿಕೆಯಿಂದಾಗಿ ಇಎಂಐ ಮೊತ್ತದಲ್ಲಿ ಏರಿಕೆಯಾಗಲಿದ್ದು, ಇದು ಫಿಕ್ಸ್‌ಡ್‌ ಬಡ್ಡಿ ದರದ ಮೂಲಕ ಕವರ್‌ ಆಗಲಿದೆ.

EMI ಆಧಾರಿತ ವೈಯಕ್ತಿಕ ಸಾಲಗಳಿಗೆ ಫ್ಲೋಟಿಂಗ್ ಬಡ್ಡಿದರಗಳನ್ನು ಮರುಹೊಂದಿಸುವ RBI ಸುತ್ತೋಲೆಯ ಪ್ರಕಾರ, ಸಾಲದಾತರು ಚಾಲ್ತಿಯಲ್ಲಿರುವ ಬಡ್ಡಿದರಗಳ ಆಧಾರದ ಮೇಲೆ ಮರುಪಾವತಿ ಸಾಮರ್ಥ್ಯವನ್ನು ನಿರ್ಣಯಿಸಬಾರದು. ಬಡ್ಡಿದರಗಳು ಏರಿದರೂ ಸಹ ಸಾಲಗಾರರು ತಮ್ಮ ಪಾವತಿ ಜವಾಬ್ದಾರಿಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದೆ. ಅಂದರೆ, ಕೆಲವು ಮಾಸಿಕಗಳಲ್ಲಿ ಇಎಂಐ ಮೊತ್ತ ಏರಿದರೂ ಕಟ್ಟಲು ಅವರು ಶಕ್ತರೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದು ಖಂಡಿತವಾಗಿಯೂ ಸಾಲಗಾರರ ಅರ್ಹತೆಯ ಮಟ್ಟವನ್ನು ಏರಿಸಲಿದೆ.

ಹಿಂದೆ, ಬಡ್ಡಿದರಗಳು ನಿಗದಿತ ಅವಧಿಯಲ್ಲಿ ಆರು ಶೇಕಡಾವಾರು ಪಾಯಿಂಟ್‌ಗಳ ಏರಿಳಿತ ಅನುಭವಿಸಿವೆ. ಇದರಿಂದ ಬಡ್ಡಿಯ ಹೊರೆ ತೀವ್ರವಾಗಿ ಹೆಚ್ಚಾಗಿದ್ದು, ಸಾಲದ ಅವಧಿಯು ಹಲವು ವರ್ಷ ಏರಿತ್ತು. ಸಾಲದಾತರು ಕೆಲವೊಮ್ಮೆ EMIಗಳನ್ನು ಏರಿಳಿಕೆ ಮಾಡುವುದಕ್ಕೆ ಹಿಂಜರಿಯುತ್ತಾರೆ; ಇದರಿಂದ EMI ಅವಧಿಗಳು ವಿಸ್ತರಿಸುತ್ತವೆ ಹಾಗೂ ಮತ್ತಷ್ಟು ಹೆಚ್ಚಿನ ಬಡ್ಡಿ ಗಳಿಕೆಗೆ ಕಾರಣವಾಗುತ್ತದೆ.

ಹೊಸ ನಿಯಮಗಳ ಪ್ರಕಾರ ಬ್ಯಾಂಕ್‌ಗಳು ಚಾಲ್ತಿಯಲ್ಲಿರುವುದಕ್ಕಿಂತ ಹೆಚ್ಚಿನ ದರದಲ್ಲಿ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ.

ಪ್ರಸ್ತುತ ಬ್ಯಾಂಕುಗಳು ಚಾಲ್ತಿಯಲ್ಲಿರುವ ಬಡ್ಡಿದರಗಳನ್ನು ಬಳಸಿಕೊಂಡು ಸಾಲಗಾರರ ಮರುಪಾವತಿ ಸಾಮರ್ಥ್ಯವನ್ನು ನಿರ್ಧರಿಸುತ್ತವೆ. ಉದಾಹರಣೆಗೆ, ನಿವೃತ್ತಿಯಾಗುವವರೆಗೆ 20 ವರ್ಷಗಳಿರುವ ವ್ಯಕ್ತಿಯು 6.5% ಬಡ್ಡಿ ದರದಲ್ಲಿ ರೂ. 1 ಕೋಟಿ ಸಾಲಕ್ಕೆ ರೂ. 74,557 EMI ಅನ್ನು ನಿಭಾಯಿಸಬಹುದು. ಆದರೆ 11% ಬಡ್ಡಿದರಕ್ಕೆ ಹೋದಾಗ ಇದು 72 ಲಕ್ಷದಷ್ಟು ಹೆಚ್ಚಾಗಬಹುದು.

ಹೊಸ ನಿಯಮಗಳು ಡಿಸೆಂಬರ್ 31, 2023ರಿಂದ ಜಾರಿಗೆ ಬರಲಿವೆ. ಇದು ಹೊಸ ಮತ್ತು ಅಸ್ತಿತ್ವದಲ್ಲಿರುವ ಸಾಲಗಾರರಿಗೆ ಅನ್ವಯಿಸುತ್ತವೆ. ಇಲ್ಲಿಯವರೆಗೆ ಮರುಪಡೆಯಲಾದ ಅಸಲು ಮತ್ತು ಬಡ್ಡಿ, ಉಳಿದ EMIಗಳು, EMI ಮೊತ್ತಗಳು ಮತ್ತು ಸಂಪೂರ್ಣ ಸಾಲದ ಅವಧಿಗೆ ವಾರ್ಷಿಕ ಬಡ್ಡಿ ದರ/ವಾರ್ಷಿಕ ಶೇಕಡಾವಾರು ದರ (APR) ಅನ್ನು ಪೂರ್ಣ ಬಹಿರಂಗಪಡಿಸುವ ಮೂಲಕ ಪಾರದರ್ಶಕತೆ ಹೆಚ್ಚಿಸಲು ಒತ್ತು ನೀಡಲಾಗಿದೆ.

ಇದನ್ನೂ ಓದಿ: RBI Monetary Policy: ಸಾಲಗಾರರಿಗೆ ಸಿಹಿ ಸುದ್ದಿ, ರೆಪೋ ದರ ಯಥಾಸ್ಥಿತಿ; ಹಣದುಬ್ಬರ ಜೇಬಿಗೆ ಮತ್ತಷ್ಟು ಭಾರ

Exit mobile version