Site icon Vistara News

RBI : ಸಾಲಗಾರರು ಗಮನಿಸಿ, ರಿಸರ್ವ್‌ ಬ್ಯಾಂಕ್‌ ಜೂನ್‌ನಲ್ಲಿ ಬಡ್ಡಿ ದರ ಏರಿಕೆ ತಡೆಯುವ ಸಾಧ್ಯತೆ ಹೆಚ್ಚು, ಕಾರಣವೇನು?

reserve bank of india office

RBI Monetary Policy Meeting Today; decision likely to maintain status quo, feel experts

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಮುಂಬರುವ ಜೂನ್‌ 6-8ರಂದು ದ್ವೈಮಾಸಿಕ ಹಣಕಾಸು ಪರಾಮರ್ಶೆ ನಡೆಸಲಿದೆ. ಈ ಸಂದರ್ಭ ಆರ್‌ಬಿಐನ ಹಣಕಾಸು ನೀತಿ ಪರಾಮರ್ಶೆ ಸಮಿತಿಯು (monetary policy committee) ಕಳೆದ ಏಪ್ರಿಲ್‌ನಲ್ಲಿ ಮಾಡಿದಂತೆ ರೆಪೊ ದರ ಏರಿಕೆಯನ್ನು ಮತ್ತೊಮ್ಮೆ ತಡೆಯುವ ಸಾಧ್ಯತೆಯೇ ಹೆಚ್ಚು ಎಂದು ವರದಿಯಾಗಿದೆ. ಹೀಗಿದ್ದರೂ ಮುಂಗಾರು ಮಳೆಯ ಸಾಧ್ಯಾಸಾಧ್ಯತೆಗಳು ಹಾಗೂ ಹಣದುಬ್ಬರ ನಿರ್ಣಾಯಕ ಅಂಶಗಳಾಗಿವೆ.

ಕಳೆದ ಏಪ್ರಿಲ್‌ 6ರಂದು ಆರ್‌ಬಿಐ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇಟ್ಟು ಮಾರುಕಟ್ಟೆಯನ್ನು ಅಚ್ಚರಿಗೊಳಿಸಿತ್ತು. ಕಳೆದ ವರ್ಷ ಮೇಯಿಂದ ಮೊದಲ ಬಾರಿಗೆ ಇಂಥ ನಿರ್ಧಾರವನ್ನು ಆರ್‌ಬಿಐ ಕೈಗೊಂಡಿತ್ತು. ಆರ್‌ಬಿಐ ರೆಪೊ ದರ ಏರಿಕೆಯನ್ನು ತಡೆ ಹಿಡಿದರೆ ಸಾಲಗಾರರಿಗೆ ನಿರಾಳವಾಗುತ್ತದೆ. ಏಕೆಂದರೆ ರೆಪೊ ದರ ಏರಿಕೆಯಾದರೆ ತಕ್ಷಣ ಬ್ಯಾಂಕ್‌ಗಳು ರೆಪೊ ದರ ಅಧರಿತ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲಗಳ ಬಡ್ಡಿ ದರಗಳನ್ನೂ ಏರಿಸುತ್ತವೆ. ಆಗ ಸಾಲದ ಇಎಂಐ ಹೊರೆ ಹೆಚ್ಚಿ ಸಾಲಗಾರರು ಕಂಗಾಲಾಗುತ್ತಾರೆ.

ಮುಂಗಾರು ಮಳೆ ಚೆನ್ನಾಗಿ ಆದಲ್ಲಿ ಹಣದುಬ್ಬರ ಕೂಡ ನಿಯಂತ್ರಣದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ. ಆದರೆ ಒಂದು ವೇಳೆ ಮುಂಗಾರು ಮಳೆ ಕೊರತೆಯಾದರೆ ಮಾತ್ರ ಹಣದುಬ್ಬರ ಮತ್ತೆ ಹೆಚ್ಚುವ ಆತಂಕವೂ ಇದೆ. ಆದ್ದರಿಂದ ಮುಂಗಾರು ಮಳೆ ಮತ್ತು ಹಣದುಬ್ಬರದ ಟ್ರೆಂಡ್‌ ಆರ್‌ಬಿಐ ನೀತಿಯ ಮೇಲೆ ಪ್ರಭಾವ ಬೀರಲಿದೆ ಎನ್ನುತ್ತಾರೆ ತಜ್ಞರು. ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆ ಇಳಿಕೆಯಾಗಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ಹಲವಾರು ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಮ್ಮ ಸಾಲಗಾರರು ಸಾಲವನ್ನು ಸಮರ್ಪಕವಾಗಿ ಮರು ಪಾವತಿಸದಿದ್ದರೆ ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡವನ್ನು, ಸಾಮಾನ್ಯ ಬಡ್ಡಿ ದರದ ಜತೆಗೆ ಸಮೀಕರಿಸಿ ವಿಧಿಸುವುದನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಸಾಲಗಳಿಗೆ ದಂಡ ವಿಧಿಸುವುದಕ್ಕೆ ಸಂಬಂಧಿಸಿ ಕರಡು ನಿಯಮಾವಳಿಗಳನ್ನು ರಚಿಸಿದೆ. 2023ರ ಏಪ್ರಿಲ್‌ 12ರಂದು ಬಿಡುಗಡೆಗೊಳಿಸಿದೆ. ಹಾಗಾದರೆ ದಂಡಕ್ಕೆ ಸಂಬಂಧಿಸಿ ಆರ್‌ಬಿಐ ಏನು ಹೇಳಿದೆ ಎಂಬುದನ್ನು ನೋಡೋಣ.

ಸಾಲದ ಖಾತೆಯ ದಂಡದ ಬಗ್ಗೆ ಆರ್‌ಬಿಐ ಹೇಳಿದ್ದೇನು?

cash

ಸಾಲದ ಖಾತೆಗೆ ಸಂಬಂಧಿಸಿದ ದಂಡವನ್ನು ಶುಲ್ಕ ಎಂದು ಪರಿಗಣಿಸಬೇಕೇ ವಿನಾ, ಒಟ್ಟು ಬಡ್ಡಿ ದರ ಎಂದು ಬಡ್ಡಿಯ ಜತೆಗೆ ಸೇರಿಸಬಾರದು ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ.‌ ಬ್ಯಾಂಕ್‌ಗಳು ಎಲ್ಲರಿಗೂ ಮುಕ್ತ ಹಾಗೂ ಪಾರದರ್ಶಕವಾಗಿ ಸೇವೆ ನೀಡುತ್ತದೆ ಎಂಬುದನ್ನು ಖಾತರಿಪಡಿಸಲು ದಂಡವನ್ನು ವಿಧಿಸುತ್ತದೆ. ಜತೆಗೆ ಸಾಲಗಾರರಲ್ಲಿ ಸಾಲದ ಶಿಸ್ತು (credit discipline) ಬೆಳೆಸಲು ಕೂಡ ಇದು ಸಹಕಾರಿ. ಸಾಲಗಾರರು ಸಾಲ ಮರು ಪಾವತಿಸುವಲ್ಲಿ ವಿಳಂಬಿಸಿದರೆ ಅಥವಾ ಇಎಂಐ (equated monthly installment) ಅನ್ನು ಸರಿಯಾಗಿ ಕಟ್ಟದಿದ್ದರೆ ದಂಡ ವಿಧಿಸಲಾಗುತ್ತದೆ. ಬೇರೆ ಬೇರೆ ಬ್ಯಾಂಕ್‌ಗಳು ಭಿನ್ನ ದಂಡವನ್ನು ವಿಧಿಸುತ್ತವೆ. ದಂಡ ಅಥವಾ Penal interest ವಾರ್ಷಿಕ 24% ಇದ್ದರೆ ಮಾಸಿಕ ಇಎಂಐ ಪಾವತಿಗೆ ವಿಳಂಬವಾದರೆ 2% ದಂಡ ಅನ್ವಯಿಸುತ್ತದೆ. ಉದಾಹರಣೆಗೆ ನೀವು 50,000 ರೂ. ಇಎಂಐ ಕಟ್ಟುತ್ತಿದ್ದೀರಿ ಎಂದಿಟ್ಟುಕೊಳ್ಳಿ. penal interest ವಾರ್ಷಿಕ 24% ಇದ್ದರೆ ಮಾಸಿಕ 2% ಆಗುತ್ತದೆ. ಅಂದರೆ 1,000 ರೂ. ದಂಡ (50,000 ರೂ.ಗಳ 2%) ಪಾವತಿಸಬೇಕಾಗುತ್ತದೆ.

ದಂಡಕ್ಕೆ ಬಡ್ಡಿ ಇರುತ್ತದೆಯೇ? : ಇದೆ. 2018ರಲ್ಲಿ GST-AAR (GST Authority for Advance Rulings) ಅಡಿಯಲ್ಲಿ ವಿಳಂಬಿತ ಸಾಲ ಮರು ಪಾವತಿಯ ಮೇಲೆ 18% ಜಿಎಸ್‌ಟಿಯನ್ನು ವಿಧಿಸಲಾಯಿತು. ಹೀಗಾಗಿ ಮೇಲ್ಕಂಡ ಉದಾಹರಣೆಯಲ್ಲಿ 1,000 ರೂ.ಗೆ 18% ಜಿಎಸ್‌ಟಿ ಸೇರಿ ಒಟ್ಟು 1,180 ರೂ. ನೀಡಬೇಕಾಗುತ್ತದೆ. ಎಸ್‌ಬಿಐ ವೆಬ್‌ ಸೈಟ್‌ ಪ್ರಕಾರ ಆ ಬ್ಯಾಂಕ್‌ನಲ್ಲಿ 25,000 ರೂ. ತನಕದ ಸಾಲದ ಮೇಲೆ ದಂಡ (penal Interest) ಅನ್ವಯವಾಗುವುದಿಲ್ಲ. 25,000 ರೂ.ಗಿಂತ ಹೆಚಿನ ಸಾಲಕ್ಕೆ 2% ಅನ್ವಯವಾಗುತ್ತದೆ.

ದಂಡಗಳು ಬ್ಯಾಂಕ್‌ಗಳ ಆದಾಯ ಹೆಚ್ಚಿಸುವುದಕ್ಕಲ್ಲ:

ಬ್ಯಾಂಕ್‌ಗಳು ಸಾಲಗಾರರಿಗೆ ದಂಡವನ್ನು ವಿಧಿಸುವ ಮೂಲಕವೇ ತಮ್ಮ ಆದಾಯವನ್ನು ಹೆಚ್ಚಿಸಬಾರದು. ಅದು ದಂಡದ ಪರಿಕಲ್ಪನೆಯ ದುರ್ಬಳಕೆಯಾದಂತಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಈ ಬಗ್ಗೆ 2023ರ ಫೆಬ್ರವರಿ 8ರಂದು ಆರ್‌ಬಿಐ ಪ್ರಕಟಣೆಯೊಂದನ್ನು ಹೊರಡಿಸಿತ್ತು. ದಂಡ ಶುಲ್ಕವನ್ನು (penal charges) ತಾರ್ಕಿಕ ಮತ್ತು ಪಾರದರ್ಶಕ ರೀತಿಯಲ್ಲಿ (reasonable and transparent manner) ನಿಗದಿಪಡಿಸಬೇಕು. ದಂಡ ಬಡ್ಡಿ (penal interest) ಎಂದು ಬಡ್ಡಿಯ ಜತೆಗೆ ಸಮೀಕರಿಸಬಾರದು ಎಂದು ಸ್ಪಷ್ಟಪಡಿಸಿದೆ.

Exit mobile version