ಮುಂಬಯಿ: ಸುಲಭವಾಗಿ ಹಾಗೂ ತ್ವರಿತವಾಗಿ, ಹೆಚ್ಚಿನ ದಾಖಲೆಯ ಅಗತ್ಯ ಕೂಡ ಇಲ್ಲದೆ ಸಾಲ ಕೊಡುವುದಾಗಿ ನಂಬಿಸುವ ಹಾಗೂ ಅಂತಿಮವಾಗಿ ಭಾರಿ ಬಡ್ಡಿ ದರ ವಿಧಿಸಿ ಸಾಲಗಾರರನ್ನು ವಂಚಿಸುವ ಆನ್‌ಲೈನ್ ಸಾಲದ ಆ್ಯಪ್‌ಗಳ (Loan Apps) ಹಾವಳಿಯನ್ನು ನಿಯಂತ್ರಿಸಲು ಇದೀಗ ಆರ್‌ಬಿಐ ಮಧ್ಯಪ್ರವೇಶಿಸಿದೆ.
ಆರ್‌ಬಿಐ ಡಿಜಿಟಲ್ ಲೆಂಡಿಂಗ್ ರೆಗ್ಯುಲೇಟರಿ ಫ್ರೇಮ್‌ವರ್ಕ್ ಅನ್ನು ಬುಧವಾರ ಬಿಡುಗಡೆಗೊಳಿಸಿದ್ದು, ಡಿಜಿಟಲ್ ಸಾಲ (Digital lending) ವಿತರಣೆಯನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಿದೆ. ಅವುಗಳು ಇಂತಿವೆ: ೧. ಆರ್‌ಬಿಐ ನಿಯಂತ್ರಣದಲ್ಲಿರುವ ಹಾಗೂ ಸಾಲದ ವಹಿವಾಟು ನಡೆಸಲು ಆರ್‌ಬಿಐನಿಂದ ಅನುಮತಿ ಪಡೆದಿರುವ ಡಿಜಿಟಲ್ ಸಾಲ ವಿತರಕ ಸಂಸ್ಥೆಗಳು. ೨. ಇತರ ನಿಯಂತ್ರಕ ವ್ಯವಸ್ಥೆಯಿಂದ ಅನುಮತಿ ಪಡೆದಿರುವ, ಆದರೆ ಆರ್‌ಬಿಐ ಅನುಮತಿ ಪಡೆಯದಿರುವ ಡಿಜಿಟಲ್ ಸಾಲ ವಿತರಕ ಸಂಸ್ಥೆಗಳು. ೩. ಯಾವುದೇ ನಿಯಂತ್ರಕ ವ್ಯವಸ್ಥೆಯಿಂದ ಹೊರಗಿರುವ ಡಿಜಿಟಲ್ ಸಾಲ ವಿತರಕ ಸಂಸ್ಥೆಗಳು.
ಆರ್‌ಬಿಐ ಈ ಹಿಂದೆ ಆನ್‌ಲೈನ್ ಮತ್ತು ಮೊಬೈಲ್ ಆ್ಯಪ್‌ಗಳ ಮೂಲಕ ಸಾಲ ವಿತರಣೆ ಬಗ್ಗೆ ಅಧ್ಯಯನ ನಡೆಸಲು ಕಾರ್ಯಪಡೆ ರಚಿಸಿತ್ತು. (digital lending including lending through online platforms and mobile apps) ಇದರ ವರದಿಯ ಆಧಾರದ ಮೇರೆಗೆ ಆರ್‌ಬಿಐ ತನ್ನ ಆರಂಭಿಕ ಮಾನದಂಡವನ್ನು ಬಿಡುಗಡೆಗೊಳಿಸಿದೆ.
ಆರ್‌ಬಿಐ ನಿಯಮಾವಳಿಯಲ್ಲಿ ಏನೇನಿದೆ?:
- ಎಲ್ಲ ಬಗೆಯ ಡಿಜಿಟಲ್ ಸಾಲ ವಿತರಣೆಗಳು ಮತ್ತು ಮರುಪಾವತಿಯು ಸಾಲಗಾರರ ಬ್ಯಾಂಕ್ ಖಾತೆ ಮತ್ತು ಆರ್‌ಬಿಐ ನಿಯಂತ್ರಿತ ಸಂಸ್ಥೆಗಳ (regulated entity) ಮೂಲಕ ಮಾತ್ರ ನಡೆಯಬೇಕು. ಇದು ಹೊರತುಪಡಿಸಿ ಯಾವುದೇ ಸಾಲ ವಿತರಿಸುವ ಸಂಸ್ಥೆಯ pool account ಅಥವಾ ಮೂರನೇ ಪಾರ್ಟಿಯ ಖಾತೆಯಲ್ಲಿ ಸಂಗ್ರಹವಾಗಿ ವರ್ಗಾವಣೆಯಾಗಕೂಡದು.
- ಸಾಲದ ಮಿತಿಯನ್ನು (credit limit) ಸಾಲಗಾರರ ಅನುಮತಿ ಇಲ್ಲದೆಯೇ ಏರಿಸಬಾರದು.
- ಸಾಲ ವಿತರಣೆಗೆ ಮುನ್ನ ಸಾಲದ ಎಲ್ಲ ವಿವರಗಳನ್ನು ಒಳಗೊಂಡಿರುವ ಹೇಳಿಕೆಯನ್ನು ನೀಡಬೇಕು.(Standardised key fact statement) ಇದರಲ್ಲಿ ಸಾಲದ ಒಪ್ಪಂದ, ವಾರ್ಷಿಕ ಬಡ್ಡಿ ದರ ವಿವರವನ್ನು ನೀಡಬೇಕು.
- ಸಾಲದ ಒಪ್ಪಂದದ ಪ್ರಕಾರ ಯಾವುದೇ ದಂಡ ಇಲ್ಲದೆ ಅಸಲು ಪಾವತಿಸಿ ಸಾಲ ಮರು ಪಾವತಿಸಿ ನಿರ್ಗಮಿಸಲು ಇರುವ ಕಾಲಾವಕಾಶವನ್ನು ಮೊದಲೇ ತಿಳಿಸಬೇಕು.
- ಸಾಲದ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಸಾಲ ವಿತರಕ ಸಂಸ್ಥೆಗಳಿಗೆ (lending service providers) ಪಾವತಿಸಬೇಕಾದ ಯಾವುದೇ ಶುಲ್ಕವನ್ನು ಆರ್‌ಬಿಐ ನಿಯಂತ್ರಿತ ಸಂಸ್ಥೆಗಳ ಮೂಲಕ (regulated entity) ನೇರವಾಗಿ ನೀಡಬೇಕು. ಸಾಲಗಾರರಿಂದ ನೀಡಬೇಕಾದ್ದಲ್ಲ.
ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಮೊಬೈಲ್ ಆ್ಯಪ್‌ಗಳ ವಂಚನೆ ತಾಳಲಾರದೆ ಹಲವು ಮಂದಿ ಆತ್ಮಹತ್ಯೆ ಮಾಡಿರುವ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ಇದೀಗ ಇಂಥ ವಂಚನೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನ ಸಾಮಾನ್ಯರೇ ಹೆಚ್ಚಾಗಿ ಇಂಥ ವಂಚನೆಗಳಲ್ಲಿ ಸಿಲುಕಿದ್ದಾರೆ.