ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ತನ್ನ ರೆಪೊ ದರದಲ್ಲಿ ಶೇ.0.50 ಮೂಲಾಂಕ ಏರಿಕೆ ಮಾಡಿರುವುದರಿಂದ ನಿಮ್ಮ ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲದ EMIನಲ್ಲಿ ಗಣನೀಯ ಹೆಚ್ಚಳವಾಗಲಿದೆ. ಅದು ಎಷ್ಟು ಎಂಬ ಲೆಕ್ಕಾಚಾರ ಮಾಡಿದ್ದೀರಾ? ಈ ಬಗ್ಗೆ ಇಲ್ಲಿದೆ ಮಾಹಿತಿ.
ಗೃಹ ಸಾಲ
ಒಂದು ವೇಳೆ ನೀವು 30 ಲಕ್ಷ ರೂ.ಗಳ ಗೃಹ ಸಾಲ ಖರೀದಿಸಿದ್ದು, ಸಾಲದ ಅವಧಿ 20 ವರ್ಷಗಳು ಎಂದಿಟ್ಟುಕೊಳ್ಳಿ. ವಾರ್ಷಿಕ 7% ಬಡ್ಡಿ ದರ ಇದ್ದರೆ, ಇನ್ನು ಮುಂದೆ ಇಎಂಐನಲ್ಲಿ 1,648 ರೂ. ಏರಿಕೆಯಾಗಲಿದೆ. ಅಂದರೆ ಸಾಲದ ಇಎಂಐ 23,259 ರೂ.ಗಳಿಂದ 24,907 ರೂ.ಗೆ ಹೆಚ್ಚಳವಾಗಲಿದೆ. ಪ್ರತಿ 1 ಲಕ್ಷ ರೂ. ಇಎಂಐಗೆ 55 ರೂ. ಹೆಚ್ಚುವರಿ ಹಣ ಕೊಡಬೇಕಾಗುತ್ತದೆ.
ಕಾರು ಸಾಲ
ನೀವು 8 ಲಕ್ಷ ರೂ. ಕಾರು ಸಾಲವನ್ನು ತೆಗೆದುಕೊಂಡಿದ್ದರೆ ಮತ್ತು 7 ವರ್ಷಗಳ ಅವಧಿ ಇದ್ದು,. ಬಡ್ಡಿ ದರ 10%ರಿಂದ 10.9% ಇದ್ದರೆ ಈಗ ಇಎಂಐನಲ್ಲಿ 375 ರೂ. ಹೆಚ್ಚಳವಾಗಲಿದೆ. ಅಂದರೆ 13,281 ರೂ.ಗಳಿಂದ 13,656 ರೂ.ಗೆ ಹಚ್ಚಳವಾಗಲಿದೆ.
ವೈಯಕ್ತಿಕ ಸಾಲ
ನೀವು 5 ವರ್ಷಗಳ ಅವಧಿಗೆ 5 ಲಕ್ಷ ರೂ.ಗಳ ಸಾಲವನ್ನು ತೆಗೆದುಕೊಂಡಿದ್ದರೆ, ಬಡ್ಡಿ ದರ 14%ರಿಂದ 14.9%ಕ್ಕೆ ಏರಿಕೆಯಾಗಿದ್ದರೆ, ಇಎಂಐ 235 ರೂ. ಹೆಚ್ಚಳವಾಗಲಿದೆ. ಅಂದರೆ 11,634 ರೂ.ಗಳಿಂದ 11,869 ರೂ.ಗೆ ಹೆಚ್ಚಳವಾಗಲಿದೆ.
ಡೆಟ್ ಮ್ಯೂಚುವಲ್ ಫಂಡ್‌ಗಳಿಗೆ ಕಹಿ
ಮ್ಯೂಚುವಲ್ ಫಂಡ್ ಮ್ಯಾನೇಜರ್‌ಗಳ ಪ್ರಕಾರ ಬಡ್ಡಿ ದರ ಏರಿಕೆಯಿಂದ ಡೆಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ಅಷ್ಟಾಗಿ ಪ್ರಯೋಜನ ಇಲ್ಲ. ಬಾಂಡ್ ಆಧಾರಿತ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದಿದ್ದರೆ ಕನಿಷ್ಠ ಮೂರು ವರ್ಷ ಹೂಡಿಕೆ ಮಾಡಬೇಕು. ಮೂರಕ್ಕಿಂತ ಹೆಚ್ಚು ವರ್ಷ ಹೂಡಿಕೆ ಮಾಡುವುದಿದ್ದರೆ ಬ್ಯಾಂಕಿಂಗ್ ಮತ್ತು ಪಿಎಸ್‌ಯು ಫಂಡ್ ಮತ್ತು ಕಾರ್ಪೊರೇಟ್ ಬಾಂಡ್ ಫಂಡ್‌ಗಳು ಸೂಕ್ತ. ಅಲ್ಪಾವಧಿಗೆ ಆದರೆ ಲಿಕ್ವಿಡ್ ಫಂಡ್, ಅಲ್ಟ್ರಾ ಶಾರ್ಟ್ ಟರ್ಮ್ ಫಂಡ್, ಮನಿ ಮಾರ್ಕೆಟ್ ಫಂಡ್ ಉಪಯುಕ್ತ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಆರ್‌ಬಿಐನಿಂದ ಸಾಲದ ಬಡ್ಡಿ ದರ 0.50% ಏರಿಕೆ, ಹಣದುಬ್ಬರ 6%ಕ್ಕೆ ಇಳಿಕೆ ನಿರೀಕ್ಷೆ