Site icon Vistara News

RBI MPC Meet : ಆರ್‌ಬಿಐ ರೆಪೊ ದರ 0.25% ಏರಿಕೆ ಸಾಧ್ಯತೆ, ಸಾಲದ ಇಎಂಐ, ಠೇವಣಿ ದರ ಹೆಚ್ಚಳ ನಿರೀಕ್ಷೆ

RBI

ನವ ದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಫೆಬ್ರವರಿಯಲ್ಲಿ ತನ್ನ ರೆಪೊ ದರದಲ್ಲಿ 0.25% ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. ರಾಯ್ಟರ್ಸ್‌ ಸಮೀಕ್ಷಾ ವರದಿ ಕೂಡ ಇದನ್ನೇ ತಿಳಿಸಿದೆ. ಫೆ.6-8ರಂದು ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆ ನಡೆಯಲಿದ್ದು, ಪ್ರಸಕ್ತ ಸಾಲಿನಲ್ಲಿ ಕೊನೆಯ ಬಾರಿಗೆ ರೆಪೊ ದರವನ್ನು 6.50%ಕ್ಕೆ ಏರಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. (RBI MPC Meet) (ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಫಂಡ್‌ಗೆ ನೀಡುವ ಬಡ್ಡಿ ದರ) ರಾಯ್ಟರ್ಸ್‌ ಕಳೆದ ಜನವರಿ 13-27 ಅವಧಿಯಲ್ಲಿ ಸಮೀಕ್ಷೆ ನಡೆಸಿತ್ತು. ಈಗಾಗಲೇ ಆರ್‌ಬಿಐ ಹಿಂದಿನ ಸಭೆಗಳಲ್ಲಿ ರೆಪೊ ದರವನ್ನು ಏರಿಸಿತ್ತು.

ಆರ್‌ಬಿಐ 2022-23ರಲ್ಲಿ ಡಿಸೆಂಬರ್‌ ತನಕ ರೆಪೊ ದರದಲ್ಲಿ 2.25% ಏರಿಸಿತ್ತು. ಪ್ರಸ್ತುತ ರೆಪೊ ದರ 6.25% ಇದೆ. ರೆಪೊ ದರ ಏರಿಕೆಯಾದರೆ ಠೇವಣಿಗಳ ಬಡ್ಡಿ ದರ ಹಾಗೂ ಸಾಲದ ಬಡ್ಡಿ ದರ ಎರಡೂ ಏರಿಕೆಯಾಗಲಿದೆ. ಕಳೆದ ಮೇ ಬಳಿಕ ಎಫ್‌ಡಿ ದರಗಳು ಏರುಗತಿಯಲ್ಲಿವೆ. ಸಾಲದ ಇಎಂಐ ಹೆಚ್ಚಳವಾಗಲಿದೆ. ಅಮೆರಿಕದ ಫೆಡರಲ್‌ ರಿಸರ್ವ್‌, ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಬಡ್ಡಿ ದರವನ್ನು ಏರಿಸಿರುವುದರಿಂದ, ಅದಕ್ಕೆ ತಕ್ಕಂತೆ ರೆಪೊ ದರ ಏರಿಸಬೇಕಾದ ಅಗತ್ಯ ಆರ್‌ಬಿಐಗೆ ಕೂಡ ಇದೆ ಎನ್ನುತ್ತಾರೆ ತಜ್ಞರು.

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ ತನ್ನ ರೆಪೊ ದರವನ್ನು ಏರಿಸುತ್ತಿದೆ. ಕಳೆದ ಡಿಸೆಂಬರ್‌ನಿಂದ ಹಣದುಬ್ಬರ ಇಳಿಮುಖವಾಗುತ್ತಿದೆ. ಸತತ ಎರಡು ತಿಂಗಳುಗಳಿಂದ ಗ್ರಾಹಕ ಆಧಾರಿತ ಹಣದುಬ್ಬರ (CPI Inflation) ಆರ್‌ಬಿಐನ ಸಹಿಷ್ಣುತೆಯ ಮಟ್ಟದಲ್ಲಿ ಇದೆ. ಅಂದರೆ 6%ಕ್ಕಿಂತ ಕಡಿಮೆ ಇದೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಬುಧವಾರ (ಫೆ.8) ಹಣಕಾಸು ನೀತಿ ಪರಾಮರ್ಶೆ ಸಮಿತಿಯ ನಿರ್ಣಯವನ್ನು ಪ್ರಕಟಿಸಲಿದ್ದಾರೆ. ಇದು ಸಭೆಯ (ಫೆ.6-8) ಕೊನೆಯ ದಿನವಾಗಿದೆ.

Exit mobile version