Site icon Vistara News

RBI Warning | ಬಡ್ಡಿ ದರ ಏರಿಕೆ ಪರಿಣಾಮ 2023ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಗೆ ಅಪಾಯ ಹೆಚ್ಚು: ಆರ್‌ಬಿಐ

RBI imposed huge fine on ICICI Bank, Kotak Mahindra Bank

ಮುಂಬಯಿ: ಮುಂದಿನ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆಗೆ ಧಕ್ಕೆಯಾಗುವ ಅಪಾಯ ಇದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ವರದಿ ತಿಳಿಸಿದೆ. (RBI Warning) ವರದಿ ಏನೆಂದಿದೆ ನೋಡೋಣ.

ಬಡ್ಡಿ ದರ ಏರಿಕೆಯ ಎಫೆಕ್ಟ್

ಅಮೆರಿಕದ ಫೆಡರಲ್‌ ರಿಸರ್ವ್‌ ಹಣದುಬ್ಬರವನ್ನು ತಗ್ಗಿಸುವ ಉದ್ದೇಶದಿಂದ ಮಾಡಿರುವ ಬಡ್ಡಿ ದರ ಏರಿಕೆಯ ಪೂರ್ಣ ಪ್ರಮಾಣದ ಪರಿಣಾಮ 2023ರಲ್ಲಿ ಕಾಣಿಸಲಿದೆ ಎಂದು ಆರ್‌ಬಿಐ ಬುಲೆಟಿನ್‌ ತಿಳಿಸಿದೆ.
ದಿನೇ ದಿನೇ 2023ರಲ್ಲಿ ಜಾಗತಿಕ ಆರ್ಥಿಕತೆ ಬಿಕ್ಕಟ್ಟಿಗೆ ತೆರಳುವ ಲಕ್ಷಣ ದಟ್ಟವಾಗುತ್ತಿದೆ. ವಿಶ್ವ ಮಟ್ಟದಲ್ಲಿ ಹಣದುಬ್ಬರದ ಪ್ರಮಾಣ ಏರಿಕೆಯಾಗಬಹುದು. ಹಣದುಬ್ಬರವನ್ನು ತಗ್ಗಿಸಲು ಸೆಂಟ್ರಲ್‌ ಬ್ಯಾಂಕ್‌ಗಳು ಬಡ್ಡಿ ದರ ಏರಿಸಿದ್ದರೂ, ಬೆಳವಣಿಗೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮ, ಇಳಿಕೆಯ ಲಕ್ಷಣ ತೋರಿಸಿರುವ ಹಣದುಬ್ಬರ ದಿಢೀರ್‌ ಹೆಚ್ಚುವ ಸಾಧ್ಯತೆಯೂ ಇದೆ.

ಇಂಧನ ದರದಲ್ಲಿ ಅನಿಶ್ಚಿತತೆ

ಇಂಧನ ದರ ರಷ್ಯಾ-ಉಕ್ರೇನ್‌ ಯುದ್ಧಕ್ಕಿಂತ ಮೊದಲಿನ ಸ್ಥಿತಿಗೆ ಇಳಿದಿದ್ದರೂ, ಇಂಧನ ವಲಯದ ಷೇರು ದರ ಜಿಗಿಯುತ್ತಿದೆ. ಹಣದುಬ್ಬರ ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ಪೂರ್ಣವಾಗಿ ಇಳಿಕೆಯಾಗಿಲ್ಲ. ಇಂಧನ ದರದಲ್ಲಿ ಒಂದು ಬಗೆಯ ಅನಿಶ್ಚಿತತೆ ದೂರವಾಗಿಲ್ಲ. ಜಾಗತಿಕ ಸರಕು ಮಾರುಕಟ್ಟೆಯಲ್ಲಿ ದರಗಳು ಇಳಿಮುಖವಾಗಿದ್ದರೂ, ಆಹಾರ ದರಗಳು ಈಗಲೂ ಕೋವಿಡ್‌ ಪೂರ್ವ ಮಟ್ಟಕ್ಕಿಂತ ಮೇಲಿವೆ. ಹೀಗಾಗಿ 2023ರಲ್ಲಿ ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಹೆಚ್ಚುವ ಸಾಧ್ಯತೆಯೇ ಕಾಣಿಸುತ್ತಿದೆ.
ಜಾಗತಿಕ ಆರ್ಥಿಕ ಬೆಳವಣಿಗೆಯ ದರ 2023ರಲ್ಲಿ 2.2%ರ ಕೆಳಮಟ್ಟದಲ್ಲಿ ಇರಬಹುದು. ಅಮೆರಿಕದಲ್ಲಿ 0.5%, ಬ್ರಿಟನ್‌ನಲ್ಲಿ 0.0% ಯೂರೊ ವಲಯದಲ್ಲಿ 0.3% ಹಾಗೂ ಜಪಾನ್‌ನಲ್ಲಿ 1.4%ಕ್ಕೆ ಕುಸಿಯಬಹುದು ಎಂದು ಆರ್‌ಬಿಐ, ಒಇಸಿಡಿ ವರದಿಯನ್ನು ಉಲ್ಲೇಖಿಸಿದೆ.
ಏಷ್ಯಾ ಚಾಲಕ ಶಕ್ತಿ: 2024ರಲ್ಲಿ ಜಾಗತಿಕ ಆರ್ಥಿಕತೆ ತುಸು ಚೇತರಿಕೆ ಕಾಣಬಹುದು. ಪ್ರಗತಿಶೀಲ ಏಷ್ಯಾ ಜಾಗತಿಕ ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಯಾಗಲಿದೆ ಎಂದು ವರದಿ ತಿಳಿಸಿದೆ.

Exit mobile version