ಬಳಕೆಯಾಗದ ಆಸ್ತಿಯನ್ನು (assets) ಇಟ್ಟುಕೊಳ್ಳುವುದು ಒಂದು ರಾಷ್ಟ್ರೀಯ ಅಪರಾಧ (national crime) ಎಂದು ನಾನು ಭಾವಿಸುತ್ತೇನೆ. ದೇಶದಲ್ಲಿ ಒಂದೆಡೆ ವಸತಿ ಕೊರತೆಯಿದೆ. ಇನ್ನೊಂದೆಡೆ 1.14 ಕೋಟಿ ಫ್ಲಾಟ್‌ಗಳು ಖಾಲಿ ಇವೆ ಎಂದು ಭಾರತದ ರಾಷ್ಟ್ರೀಯ ರಿಯಲ್ ಎಸ್ಟೇಟ್ (Real Estate) ಅಭಿವೃದ್ಧಿ ಮಂಡಳಿ (NAREDCO) ಅಧ್ಯಕ್ಷ ಜಿ. ಹರಿಬಾಬು (G. Haribabu) ತಿಳಿಸಿದ್ದಾರೆ.
ಪ್ರಸ್ತುತ ದೇಶದಲ್ಲಿ ಸುಮಾರು ಒಂದು ಕೋಟಿ ಮನೆಗಳು ಖಾಲಿ ಬಿದ್ದಿವೆ. ಒಂದೆಡೆ ದುಬಾರಿ ಮನೆಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮತ್ತೊಂದೆಡೆ ದೇಶದ ದೊಡ್ಡ ನಗರಗಳಲ್ಲಿ ಅಗ್ಗದ ಮನೆಗಳ ಬೇಡಿಕೆ ವೇಗವಾಗಿ ಕುಸಿಯುತ್ತಿದೆ ಎಂದು ಅವರು ಹೇಳಿದ್ದಾರೆ.
ಅಂಕಿಅಂಶಗಳ ಪ್ರಕಾರ 2019 ಮತ್ತು 2023 ರ ನಡುವೆ 1.5 ಕೋಟಿ ರೂ. ಗಿಂತ ಹೆಚ್ಚು ವೆಚ್ಚದ ಮನೆಗಳ ಬೇಡಿಕೆಯು ಸುಮಾರು 1000 ಪ್ರತಿಶತದಷ್ಟು ಹೆಚ್ಚಾಗಿದೆ. ಶ್ರೀಮಂತರು ಮತ್ತು ಸಾಂಸ್ಥಿಕ ಹೂಡಿಕೆದಾರರು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಜಿಗಿದಿರುವುದರಿಂದ ಈ ರೀತಿಯಾಗಿದೆ. ಆದರೆ, ದೇಶಕ್ಕೆ ಅಗ್ಗದ ಮನೆಗಳ ಅಗತ್ಯವಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿವೃದ್ಧಿಗೆ ಅವರ ಬೇಡಿಕೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.
ಬಿಲ್ಡರ್ ಗಳಿಗೆ ಕೇವಲ ಶೇ. 10ರಷ್ಟು ಜನರಷ್ಟೇ ಗುರಿ
2022ರಲ್ಲಿ ಹೈದರಾಬಾದ್‌ನಲ್ಲಿ 5,300 ಅಗ್ಗದ ಮನೆಗಳನ್ನು ಮಾರಾಟ ಮಾಡಲಾಗಿದೆ. 2023ರಲ್ಲಿ ಈ ಸಂಖ್ಯೆ ಕೇವಲ 3,800 ಕ್ಕೆ ಇಳಿಕೆಯಾಗಿದೆ. ಕೆಲವೇ ಜನರಲ್ಲಿ ಹಣವು ವೇಗವಾಗಿ ಹೆಚ್ಚುತ್ತಿದೆ. ದೇಶದ ಜನಸಂಖ್ಯೆಯ ಶೇ. 10ರಷ್ಟು ಮಂದಿಯಲ್ಲಿ ಶೇ. 63ರಷ್ಟು ಸಂಪತ್ತು ಸಂಗ್ರಹವಾಗಿದೆ. ಈ ಸಂಖ್ಯೆ 14 ಕೋಟಿ ಜನರದ್ದು. ಈ ಸಮಯದಲ್ಲಿ ಹೆಚ್ಚಿನ ಬಿಲ್ಡರ್‌ಗಳು ಈ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಸುಮಾರು 1.14 ಕೋಟಿ ಮನೆಗಳು ಖಾಲಿ ಬಿದ್ದಿರುವುದಕ್ಕೆ ಇದೇ ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ.
ಖರೀದಿಸಿ ಬಳಕೆಯಾಗದ ಮನೆಗಳು
ಹೂಡಿಕೆದಾರರು ಖರೀದಿಸುವ ಮನೆಗಳನ್ನು ಬಳಸುತ್ತಿಲ್ಲ ಎಂದು ತಿಳಿಸಿರುವ ಹರಿಬಾಬು, ಈ ಮನೆಗಳನ್ನು ಬಾಡಿಗೆಗೆ ಸಹ ನೀಡುತ್ತಿಲ್ಲ. ಒಂದೆಡೆ ಜನ ಮನೆ ಹುಡುಕಿಕೊಂಡು ಅಲೆದಾಡುತ್ತಿದ್ದರೆ, ಮತ್ತೊಂದೆಡೆ ಈ ಮನೆಗಳು ಖಾಲಿ ಬಿದ್ದಿವೆ. ಹೂಡಿಕೆಗಾಗಿ ಖರೀದಿಸಿದ ಈ ಮನೆಗಳು ಬಳಕೆಯಾಗುತ್ತಿಲ್ಲ. ಇದೊಂದು ರೀತಿಯ ಅಪರಾಧ. ಅಂತಹ ಮನೆಗಳ ಮೇಲಿನ ಆಸ್ತಿ ತೆರಿಗೆಯನ್ನು ಎರಡು ಅಥವಾ ಮೂರು ಪಟ್ಟು ಹೆಚ್ಚಿಸಬೇಕು. ಇದರಿಂದ ಈ ಆಸ್ತಿಯನ್ನು ಬಳಸಬಹುದು. ನಮ್ಮ ಜನಸಂಖ್ಯೆಯ ಶೇ.60ರಷ್ಟು ಮಂದಿಗೆ ಮನೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅವರು ಸಂಪೂರ್ಣವಾಗಿ ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Water Price Hike : ತೈಲ ದರ ಬಳಿಕ ಕುಡಿಯುವ ನೀರು ದುಬಾರಿ! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ!
ಶುಲ್ಕಗಳಲ್ಲಿ ರಿಯಾಯಿತಿ
ಕೈಗೆಟಕುವ ದರದಲ್ಲಿ ಮನೆ ನಿರ್ಮಿಸಲು ಬಿಲ್ಡರ್ ಗಳ ಮೇಲೆ ಸರಕಾರ ಒತ್ತಡ ಹೇರಬೇಕು ಎಂದ ಅವರು, ಕೈಗೆಟಕುವ ಬೆಲೆಯ ಮನೆಗಳಿಗೆ ಜಿಎಸ್‌ಟಿ, ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡಬೇಕು. ಈ ಬದಲಾವಣೆಗಳು ಕೈಗೆಟುಕುವ ದರದ ವಸತಿ ವಲಯದಲ್ಲಿ ಶೇ. 25ರಷ್ಟು ಬೆಳವಣಿಗೆಯನ್ನು ತರುವ ನಿರೀಕ್ಷೆಯಿದೆ. ಕೆಳಮಧ್ಯಮ ಮತ್ತು ಮಧ್ಯಮ ವರ್ಗದವರ ಬಗ್ಗೆ ಸರಕಾರ ಚಿಂತನೆ ನಡೆಸಬೇಕಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ನಾವು ಸಾಗುತ್ತಿದ್ದೇವೆ. ನಮ್ಮ ಜನಸಂಖ್ಯೆಯ ಶೇ. 40ರಷ್ಟು ಮಂದಿ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರೆ, ನಾವು ಅಭಿವೃದ್ಧಿ ಹೊಂದಿದ ದೇಶ ಎಂದು ಹೇಗೆ ಕರೆಯಬಹುದು ಎಂದು ಅವರು ಪ್ರಶ್ನಿಸಿದ್ದಾರೆ.