ಲಂಡನ್: ಬ್ರಿಟನ್‌ನ ಆರ್ಥಿಕತೆ ಈ ವರ್ಷದ ಅಂತ್ಯದ ವೇಳೆಗೆ ಹಿಂಜರಿತಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಅಂದಾಜಿಸಿದೆ.
ಕಳೆದ ೨೭ ವರ್ಷಗಳಲ್ಲಿಯೇ ಮೊದಲ ಬಾರಿಗೆ ಬ್ಯಾಂಕ್ ಆಫ್ ಇಂಗ್ಲೆಂಡ್ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ದರವನ್ನು ಇದೀಗ ಏರಿಸಿದೆ. ಬ್ರಿಟನ್‌ನಲ್ಲಿ ಹಣದುಬ್ಬರ ಕಳೆದ ೪೨ ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಲಿದೆ.
ರಷ್ಯಾ-ಉಕ್ರೇನ್ ಸಂಘರ್ಷದ ಎಫೆಕ್ಟ್: ರಷ್ಯಾ-ಉಕ್ರೇನ್ ಸಂಘರ್ಷದ ಪರಿಣಾಮ ನೈಸರ್ಗಿಕ ಅನಿಲದ ಹೋಲ್‌ಸೇಲ್ ದರ ಇಮ್ಮಡಿಯಾಗಿದೆ. ಇದರ ಪರಿಣಾಮ ಬ್ರಿಟನ್‌ನ ಆರ್ಥಿಕತೆ ಹಿಂಜರಿತದತ್ತ ಸಾಗುತ್ತಿದೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಎಚ್ಚರಿಸಿದೆ.
೧೩%ಕ್ಕೆ ಹಣದುಬ್ಬರ ಜಿಗಿತ ಸಂಭವ: ಬ್ಯಾಂಕ್ ಆಫ್ ಇಂಗ್ಲೆಂಡ್ ತನ್ನ ಬಡ್ಡಿದರವನ್ನು ೧.೭೫%ಕ್ಕೆ ಏರಿಸಿದೆ. ಹಣದುಬ್ಬರ ಗಂಭೀರ ಮಟ್ಟದಲ್ಲಿ ಇರುವುದರಿಂದ ತಗ್ಗಿಸಲು ಬಡ್ಡಿ ದರ ಏರಿಕೆ ಅನಿವಾರ್ಯ ಎಂದು ತಿಳಿಸಿದೆ. ಈ ವರ್ಷದ ಕೊನೆಯ ಮೂರು ತಿಂಗಳಿನಲ್ಲಿ ಹಣದುಬ್ಬರ ೧೩%ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದೆ.
ಬೆಲೆ ಏರಿಕೆಗೆ ಬ್ರಿಟನ್ ತತ್ತರ
ಕಳೆದ ಜೂನ್‌ನಲ್ಲಿ ಹಣದುಬ್ಬರ ೯.೪%ಕ್ಕೆ ವೃದ್ಧಿಸಿತ್ತು. ಅಮೆರಿಕದಲ್ಲೂ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ೨.೨೫%ರಿಂದ ೨.೫%ಕ್ಕೆ ಏರಿಸಿದೆ. ಭಾರತದಲ್ಲೂ ಆರ್‌ಬಿಐ ರೆಪೊ ದರವನ್ನು ಮತ್ತಷ್ಟು ಏರಿಸುವ ನಿರೀಕ್ಷೆ ಇದೆ. ತಜ್ಞರ ಪ್ರಕಾರ ೨೦೨೩ರಲ್ಲಿ ಬ್ರಿಟನ್‌ನ ಹಣದುಬ್ಬರ ೧೫%ಕ್ಕೆ ಏರಿಕೆಯಾದರೂ ಅಚ್ಚರಿ ಇಲ್ಲ. ಬೆಲೆ ಏರಿಕೆಯಿಂದ ಬ್ರಿಟನ್‌ನಲ್ಲಿರುವ ಬಡ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಆಹಾರ ಮತ್ತು ಇಂಧನ ವೆಚ್ಚ ಗಗನಕ್ಕೇರಿರುವುದು ಇದಕ್ಕೆ ಕಾರಣ.