ಹೈದರಾಬಾದ್: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಸಂಭವಿಸುವುದರಿಂದ ಬೆಂಗಳೂರು, ಹೈದರಾಬಾದ್, ಪುಣೆಯಲ್ಲಿ ವಿಶೇಷವಾಗಿ ಕೇಂದ್ರೀಕೃತವಾಗಿರುವ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಲಾಭದಾಯಕವಾಗುವ ಸಾಧ್ಯತೆಯೂ ಇದೆ. ಹಲವಾರು ವಿದೇಶಿ ಕಂಪನಿಗಳು ತಮ್ಮ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲು ಹೊರಗುತ್ತಿಗೆ ನೀಡುವುದರಿಂದ, ಭಾರತೀಯ ಐಟಿ ಹಬ್‌ಗಳಿಗೆ ಹೊರಗುತ್ತಿಗೆಯ ಆರ್ಡರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ (Recession in US ) ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಧ್ವನಿ ಆಧರಿತ ಕಾಲ್ ಸೆಂಟರ್‌ಗಳಿಗೆ ಕೂಡ ಬೇಡಿಕೆ ವೃದ್ಧಿಸುವ ನಿರೀಕ್ಷೆ ಇದೆ. ಹೈದರಾಬದ್ ಸಾಫ್ಟ್‌ವೇರ್ ಎಂಟರ್‌ಪ್ರೈಸಸ್ ಅಸೋಸಿಯೇಶನ್‌ನ ಅಧ್ಯಕ್ಷ ಮನೀಶಾ ಸಬೂ ಅವರ ಪ್ರಕಾರ, ಬೆಂಗಳೂರು, ಹೈದರಾಬಾದ್‌ನ ಐಟಿ ಕಂಪನಿಗಳಿಗೆ ಮತ್ತಷ್ಟು ಹೆಚ್ಚಿನ ಕೆಲಸಗಳು ವರ್ಗಾವಣೆಯಾಗುವ ಸಾಧ್ಯತೆ ಇದೆ. ಆನಿಮೇಶನ್, ಸೆಮಿಕಂಡಕ್ಟರ್, ಕ್ಲೌಡ್ ಕಂಪ್ಯೂಟಿಂಗ್‌ಗೆ ಹೆಚ್ಚಿನ ಬೇಡಿಕೆ ಸಿಗಲಿದೆ.
ಹೈದರಾಬಾದ್‌ನಲ್ಲಿ ಕಂಪನಿಗಳಿಗೆ ಬೇಕಾದ ಪ್ರತಿಭಾವಂತ ಯುವ ಜನಸಂಪನ್ಮೂಲ ಲಭ್ಯವಿದೆ. ತೆಲಂಗಾಣ ಅಕಾಡೆಮಿ ಆಫ್ ಸ್ಕಿಲ್ಸ್ & ನಾಲೆಡ್ಜ್ ವತಿಯಿಂದ ತರಬೇತಿ ನೀಢಳಾಗುತ್ತಿದೆ. ರಾಜ್ಯ ಸರ್ಕಾರವು ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಹೀಗಾಗಿ ಹಲವಾರು ಬಹು ರಾಷ್ಟ್ರೀಯ ಕಂಪನಿಗಳು ಇಲ್ಲಿ ತಮ್ಮ ಗ್ಲೋಬಲ್ ಕೆಪಾಸಿಟಿ ಸೆಂಟರ್‌ಗಳನ್ನು ತೆರೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಅವರು.
ಹೀಗಿದ್ದರೂ, ಅಮೆರಿಕದಲ್ಲಿ ಹಲವಾರು ಪ್ರಮುಖ ಐಟಿ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿವೆ. ಈ ಟ್ರೆಂಡ್ ಮುಂದುವರಿಯುವ ಸಾಧ್ಯತೆಯೂ ಇದೆ. ಹೀಗಾಗಿ ಅನಿಶ್ಚಿತತೆ ಮುಂದುವರಿದಿದೆ.