ನವ ದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದಿರುವ 13,000 ಕೋಟಿ ರೂ. ಸಾಲ ಹಗರಣದ ಪ್ರಮುಖ ಆರೋಪಿ, ವಿತ್ತಾಪರಾಧಿ ಜ್ಯುವೆಲ್ಲರ್ ಮೆಹುಲ್ ಚೋಕ್ಸಿ (Mehul Choksi) ವಿರುದ್ಧದ ರೆಡ್ ಕಾರ್ನರ್ ನೋಟಿಸ್ ಅನ್ನು ಇಂಟರ್‌ಪೋಲ್ ಕೈಬಿಟ್ಟಿದೆ. ಇದರಿಂದಾಗಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಹಿನ್ನಡೆಯಾದಂತಾಗಿದೆ. ಇಂಟರ್‌ಪೋಲ್ ವೆಬ್‌ಸೈಟ್‌ನಲ್ಲಿ ಈಗ ಚೋಕ್ಸಿ ವಿರುದ್ಧದ ನೋಟಿಸ್ ಇಲ್ಲ ಎಂದು ಅವರ ಪರ ವಕೀಲರಾದ ವಿಜಯ್ ಅಗ್ರವಾಲ್ ತಿಳಿಸಿದ್ದಾರೆ. ಸಿಬಿಐ ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದೆ.
2021ರಲ್ಲಿ ಚೋಕ್ಸಿ ತಮ್ಮನ್ನು ಆಂಡಿಗುವಾ & ಬಾರ್ಬುಡಾದಿಂದ ಡೊಮಿನಿಕಾ ದ್ವೀಪ ರಾಷ್ಟ್ರಕ್ಕೆ ಅಪಹರಿಸುವ ಯತ್ನ ನಡೆದಿದೆ. ಇದರ ಉದ್ದೇಶ ಭಾರತಕ್ಕೆ ಗಡಿಪಾರು ಮಾಡುವುದಾಗಿದೆ ಎಂದು ದೂರಿದ್ದರು. ಮೂಲಗಳ ಪ್ರಕಾರ, ಚೋಕ್ಸಿ ಅವರನ್ನು ಅಪಹರಿಸುವ ಯತ್ನ ನಡೆದಿರುವ ಸಾಧ್ಯತೆ ಇದೆ ಎಂದು ಇಂಟರ್‌ಪೋಲ್ ಕೂಡ ಭಾವಿಸಿದೆ.
ಚೋಕ್ಸಿ 2018ರಲ್ಲಿ ಭಾರತದಿಂದ ಪರಾರಿಯಾಗಿದ್ದರು. ಆತ ಹಾಗೂ ಅಳಿಯ ನೀರವ್ ಮೋದಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಚೋಕ್ಸಿ ಕುಟುಂಬದ ಸದಸ್ಯರ ಪ್ರಕಾರ 2021 ಮೇ 23ರಂದು ಚೋಕ್ಸಿಯ ಅಪಹರಣ ಯತ್ನ ನಡೆದಿತ್ತು. ಹಂಗೇರಿಯ ಮಹಿಳೆ ಬಾಬರಾ ಜಾರಾಬಿಕ್ ಎಂಬುವರು ಈ ಅಪಹರಣದಲ್ಲಿ ಷಾಮೀಲಾಗಿದ್ದಾರೆ. ಅಪಹರಣಕಾರರು ಚೋಕ್ಸಿಯನ್ನು ಡೊಮಿನಿಕಾಗೆ ಕರೆದೊಯ್ದು, ಅಲ್ಲಿಂದ ಭಾರತಕ್ಕೆ ಗಡಿಪಾರು ಮಾಡುವ ಬೆದರಿಕೆ ಒಡ್ಡಿದ್ದರು. ಅದೇ ವೇಳೆ ಭಾರತೀಯ ಅಧಿಕಾರಿಗಳ ತಂಡ ಜೆಟ್ ವಿಮಾನದ ಮೂಲಕ ಡೊಮಿನಿಕಾಗೆ ಬಂದಿಳಿದಿದ್ದರು. ಅಕ್ರಮ ಪ್ರವೇಶ ಆರೋಪದಡಿಯಲ್ಲಿ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು. ಹೀಗಿದ್ದರೂ ಅಕ್ರಮ ಪ್ರವೇಶ ಆರೋಪ ಕೈಬಿಟ್ಟ ಬಳಿಕ ಆಂಟಿಗುವಾಗೆ ಚೋಕ್ಸಿ ಹಿಂತಿರುಗಿದ್ದರು.
ಚೋಕ್ಸಿ ಭಾರತೀಯ ನಾಗರಿಕ ಎಂದು ಭಾರತ ಸರ್ಕಾರ ವಾದಿಸಿದ್ದರೆ, ಆತನ ವಕೀಲರು 2017ರಲ್ಲಿ ಚೋಕ್ಸಿ ಭಾರತೀಯ ಪೌರತ್ವ ಬಿಟ್ಟು ಆಂಟಿಗುವಾದ ಪೌರತ್ವ ಪಡೆದಿದ್ದಾನೆ ಎಂದು ಹೇಳಿದ್ದಾರೆ. ಸಿಬಿಐ ಕಳೆದ ವರ್ಷ ಚೋಕ್ಸಿ ವಿರುದ್ಧ ಸಾಲ ವಂಚನೆಯ ಕೇಸ್ ದಾಖಲಿಸಿತ್ತು.
ಇಂಟರ್‌ಪೋಲ್ ಹೊರಡಿಸುವ ರೆಡ್ ಕಾರ್ನರ್ ನೋಟಿಸ್ ಪರಿಣಾಮ ವಿದೇಶಗಳಲ್ಲಿದ್ದು ನುಣುಚಿಕೊಳ್ಳುವ ಅಪರಾಧಿಗಳನ್ನು ಪತ್ತೆ ಹೆಚ್ಚಲು ಹಾದಿ ಸುಗಮವಾಗುತ್ತದೆ. ಅವರ ಚಲನವಲನಗಳ ಮೇಲೆ ನಿಗಾ ವಹಿಸಲು ಅನುಕೂಲವಾಗುತ್ತದೆ.