Site icon Vistara News

ರೈಲ್ವೆ ಪಾರ್ಸೆಲ್‌ ನೀತಿಯಲ್ಲಿ ಸುಧಾರಣೆ ಶೀಘ್ರ, ಮೊಬೈಲ್‌, ಸ್ಯಾನಿಟೈಸರ್‌ ಸಾಗಣೆಗೆ ಅವಕಾಶ

goods train

ಮುಂಬಯಿ: ಭಾರತೀಯ ರೈಲ್ವೆ ತನ್ನ ಪಾರ್ಸೆಲ್‌ ನೀತಿಯಲ್ಲಿ ಹೆಚ್ಚಿನ ಸುಧಾರಣೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಈ ಮೂಲಕ ಇ-ಕಾಮರ್ಸ್‌ ಮೂಲದ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಗೃಹೋಪಕರಣಗಳು, ಸ್ಮಾರ್ಟ್‌ಫೋನ್‌, ಸ್ಯಾನಿಟೈಸರ್ ಸೇರಿದಂತೆ ಸಣ್ಣ ಸರಕುಗಳನ್ನು ರೈಲುಗಳ ನೆಟ್‌ವರ್ಕ್ ಮೂಲಕ ಸಾಗಣೆಗೆ ಪರಿಷ್ಕೃತ ಪಾರ್ಸೆಲ್‌ ನೀತಿಯಲ್ಲಿ ಅವಕಾಶ ಸಿಗಲಿದೆ.‌

ದಿನ ನಿತ್ಯ ಬಳಕೆಯ, ಆಲ್ಕೊಹಾಲ್‌ ಅಂಶಗಳನ್ನು ಒಳಗೊಂಡಿರುವ ಸ್ಯಾನಿಟೈಸರ್‌ಗಳನ್ನು ರೈಲ್ವೆ ಜಾಲದಲ್ಲಿ ಪಾರ್ಸೆಲ್‌ ಮಾಡಲು ಸದ್ಯಕ್ಕೆ ನಿರ್ಬಂಧ ಇದೆ. ಇದು ತೆರವಾಗಲಿದೆ. ಈ ನಿಟ್ಟಿನಲ್ಲಿ ವಿಮಾನಗಳಲ್ಲಿ ಅಳವಡಿಸುವ ಮಾರ್ಗದರ್ಶಿಯ ಅಧ್ಯಯನ ನಡೆಯಲಿದೆ.

ರೈಲ್ವೆ ಇಲಾಖೆಯ ಆದಾಯದ ಮೂಲಗಳನ್ನು ಹೆಚ್ಚಿಸಲು ಇದು ಸಹಕಾರಿಯಾಗಲಿದೆ. ಇದರಿಂದ ತಕ್ಷಣಕ್ಕೆ ಭಾರಿ ಆದಾಯ ಸಿಗದಿದ್ದರೂ, ಭವಿಷ್ಯದ ದಿನಗಳಲ್ಲಿ ಮತ್ತೊಂದು ಆದಾಯ ಮೂಲವಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಕಲ್ಲಿದ್ದಲು, ಸಿಮೆಂಟ್‌, ಉಕ್ಕು ಸಾಗಣೆಯ ಮೂಲಕ ರೈಲ್ವೆ ಹೆಚ್ಚು ಆದಾಯ ಗಳಿಸುತ್ತದೆ.

ಇ-ಕಾಮರ್ಸ್‌ ಕಂಪನಿಗಳಿಗೆ ಕೂಡ ಇದರಿಂದ ಪ್ರಯೋಜನವಾಗಲಿದೆ. ಮೊಬೈಲ್‌, ಗೃಹೋಪಕರಣಗಳನ್ನು ರೈಲ್ವೆ ಜಾಲದ ಮೂಲಕ ಸಾಗಣೆ ಮಾಡಲು ಅನುಕೂಲವಾಗಲಿದೆ. ಮತ್ತೊಂದು ಕಡೆ ರೈಲ್ವೆಗೂ ಆದಾಯ ಸಿಗಲಿದೆ. ಅಮೆಜಾನ್‌ ಈಗಾಗಲೇ ಭಾರತದಲ್ಲಿ ೮-೧೦% ಸರಕುಗಳನ್ನು ರೈಲ್ವೆ ನೆಟ್‌ ವರ್ಕ್‌ ಮೂಲಕ ಸಾಗಿಸುತ್ತಿದೆ.

ಪ್ರಸ್ತುತ ರೈಲ್ವೆ ಪಾರ್ಸೆಲ್‌ ನೀತಿಯಲ್ಲಿ ಹಲವು ಕೊರತೆಗಳಿದ್ದು, ಅದರ ಸಾಧ್ಯತೆಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ಅಡ್ಡಿ ಉಂಟಾಗಿದೆ. ಪಾರ್ಸೆಲ್‌ ಸಲುವಾಗಿ ವಿಶೇಷ ರೈಲು ಬಿಡಬೇಕಿದ್ದರೆ ಸುಮಾರು ೪೫೦ ಟನ್‌ ಸರಕುಗಳು ಸಂಗ್ರಹವಾಗಬೇಕು. ಪಾರ್ಸೆಲ್‌ ನೀತಿ ಸುಧಾರಣೆಯಾದರೆ ಅನುಕೂಲವಾಗಲಿದೆ. ಅದು ಜನಪ್ರಿಯವಾಗಲಿದೆ ಎನ್ನುತ್ತಾರೆ ತಜ್ಞರು.

Exit mobile version