Site icon Vistara News

GOOD NEWS: ಸಮುದ್ರದಲ್ಲಿ ಅಕ್ರಮ ಮೀನುಗಾರಿಕೆಯ ವಿರುದ್ಧ ನಿರ್ಬಂಧಕ್ಕೆ WTO ಸಭೆಯಲ್ಲಿ ಪಟ್ಟು ಹಿಡಿದು ಗೆದ್ದ ಭಾರತ

wto

ಜಿನೀವಾ: ಭಾರತವು ಸಮುದ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ಅಕ್ರಮ ಮೀನುಗಾರಿಕೆಯನ್ನು ನಿಯಂತ್ರಿಸಲು ವಿಶ್ವ ವ್ಯಾಪಾರ ಸಂಘಟನೆಯಾದ ಡಬ್ಲ್ಯುಟಿಒದ ಸಭೆಯಲ್ಲಿ ಪಟ್ಟು ಹಿಡಿದು ಗೆದ್ದಿದೆ. ಇದರ ಪರಿಣಾಮ ಸಾಗರದಲ್ಲಿ ನಡೆಯುವ ಅಕ್ರಮ ಮೀನುಗಾರಿಕೆಯ ನಿಯಂತ್ರಣಕ್ಕೆ WTO ಅಡಿಯಲ್ಲಿ ನಿಯಮಾವಳಿಗಳು ಜಾರಿಯಾಗಲಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯೆಲ್‌ ತಿಳಿಸಿದ್ದಾರೆ.

ಮೀನುಗಾರಿಕೆಗೆ ನೀಡುವ ಸಬ್ಸಿಡಿ ಪರ ಕೂಡ ಭಾರತ ಬಲವಾಗಿ ತನ್ನ ವಾದವನ್ನು ಮಂಡಿಸಿತ್ತು. ಮೀನುಗಾರಿಗೆಗೆ ಸಬ್ಸಿಡಿ ನೀಡುವುದನ್ನು ವಿರೋಧಿಸುವ ಶ್ರೀಮಂತ ರಾಷ್ಟ್ರಗಳ ಅಜೆಂಡಾವನ್ನು ಭಾರತ ಡಬ್ಲ್ಯುಟಿಒ ಸಭೆಯಲ್ಲಿ ಖಡಾಖಂಡಿತವಾಗಿ ವಿರೋಧಿಸಿತ್ತು. ಭಾರತದ ನಿಲುವಿಗೆ ಡಬ್ಲ್ಯುಟಿಒ ಇತರ ರಾಷ್ಟ್ರಗಳ ಬೆಂಬಲ ಲಭಿಸಿತು. ಮಾತ್ರವಲ್ಲದೆ ಇ-ಕಾಮರ್ಸ್‌ ವಲಯಕ್ಕೆ ಮೋರಟೊರಿಯಂ ವಿಸ್ತರಣೆಗೆ ಆದ್ಯತೆ ನೀಡಬೇಕು ಎಂಬ ವಾದಕ್ಕೂ ಮನ್ನಣೆ ಲಭಿಸಿದೆ. ಹೀಗಾಗಿ ಡಬ್ಲ್ಯುಟಿಒ ಸಮಾವೇಶದಲ್ಲಿ ಭಾರತ ಯಶಸ್ವಿಯಾಗಿ ತನ್ನ ಪ್ರಭಾವ ಮತ್ತು ನಾಯಕತ್ವದ ಛಾಪನ್ನು ಮೂಡಿಸಿದೆ ಎಂದು ಗೋಯೆಲ್‌ ಶುಕ್ರವಾರ ವಿವರಿಸಿದ್ದಾರೆ.

” ಈ ಸಲ ಡಬ್ಲ್ಯುಟಿಒ ಸಭೆಯ ಬಳಿಕ ಯಾವುದೇ ವಿಷಯದಲ್ಲೂ ಭಾರತ ನಿಶ್ಚಿಂತೆಯಿಂದ ಹಿಂತಿರುಗುವಂತಾಗಿದೆʼ ಎಂದು 12ನೇ ಡಬ್ಲ್ಯುಟಿಒ ಸಚಿವರುಗಳ ಮಟ್ಟದ ಸಮಾವೇಶದ ನಂತರ ಪಿಯೂಷ್‌ ಗೋಯೆಲ್‌ ತಿಳಿಸಿದರು.

ಡಬ್ಲ್ಯುಟಿಒ ಸಮಾವೇಶದಲ್ಲಿ 164 ರಾಷ್ಟ್ರಗಳು ಭಾಗವಹಿಸಿದ್ದು, ಸಭೆ ಮುಗಿದ ಬಳಿಕ ಸದಸ್ಯರು ಮೀನುಗಾರಿಕೆ, ಆರೋಗ್ಯ, ಕೃಷಿ, ಆಹಾರ ಭದ್ರತೆ ಮತ್ತು ಇತರ ವಲಯಗಳ ವ್ಯಾಪಾರ ಒಪ್ಪಂದಗಳನ್ನು ಅನುಮೋದಿಸಿದರು. ಐದು ದಿನಗಳ ಕಾಲ ಸತತ ಮಾತುಕತೆ, ಸಂವಾದಗಳು ಇದಕ್ಕೂ ಮುನ್ನ ನಡೆಯಿತು.

ಈ ಸಲ ಟೀಮ್‌ ಇಂಡಿಯಾ, ವಿಶ್ವ ವ್ಯಾಪಾರ ಸಂಘಟನೆಯ ಸಭೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಮರ್ಥ ಹಾಗೂ ದಿಟ್ಟ ಪ್ರತಿನಿಧಿಯಾಗಿ ಹಲವಾರು ವಿಷಯಗಳಲ್ಲಿ ನಾಯಕತ್ವ ವಹಿಸಿತ್ತು. ತನ್ನ ನಿಲುವನ್ನು ಬಲವಾಗಿ ಪ್ರತಿಪಾದಿಸಿತ್ತು ಎಂದರು.

WTO ಸಭೆಯಲ್ಲಿ ಭಾರತ ಗಳಿಸಿದ್ದೇನು?

ಮೀನುಗಾರರ ಹಕ್ಕುಗಳ ಸಂರಕ್ಷಣೆ

ಸಮುದ್ರದ ಆಳದಲ್ಲಿ ಅಕ್ರಮ ಹಾಗೂ ಅನಿಯಂತ್ರಿತವಾಗಿ ನಡೆಯುತ್ತಿರುವ ಮೀನುಗಾರಿಕೆಯನ್ನು ನಿಲ್ಲಿಸಬೇಕು ಎಂದು ಭಾರತ ಡಬ್ಲ್ಯುಟಿಒ ಸಭೆಯಲ್ಲಿ ಬಲವಾಗಿ ವಾದಿಸಿತ್ತು. ಸಾಗರದಲ್ಲಿ ಅನಧಿಕೃತವಾಗಿ, ಯಾವುದೇ ವರದಿ ಸಲ್ಲಿಸದೆ ನಡೆಯುವ ಮೀನುಗಾರಿಕೆಯನ್ನು ತಡೆದು ಸಣ್ಣ ಮೀನುಗಾರರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ರಕ್ಷಿಸಬೇಕು ಎಂದು ಭಾರತ ಒತ್ತಾಯಿಸಿತ್ತು. ಇದಕ್ಕೆ ಸಭೆಯಲ್ಲಿ ಅನುಮೋದನೆ ಲಭಿಸಿದೆ. ಹಾಗೂ ಸೂಕ್ತ ಒಪ್ಪಂದದ ಮೂಲಕ ಮೀನುಗಾರಿಕೆಗೆ ಸಬ್ಸಿಡಿ ಮುಂದುವರಿಸಲು ಕೂಡ ಸಭೆ ಸಮ್ಮತಿಸಿದೆ.

ಭಾರತದ ಸಾಂಪ್ರದಾಯಿಕ ಮೀನುಗಾರರು ಯಾವುದೇ ಅಕ್ರಮ ಮೀನುಗಾರಿಕೆಯಲ್ಲೊ ತೊಡಗಿಸಿಕೊಳ್ಳುವುದಿಲ್ಲ. ಆಳ ಸಮುದ್ರದ ಮೀನುಗಾರಿಕೆಯನ್ನೂ ಕಾನೂನುಬಾಹಿರವಾಗಿ ಮಾಡುವುದಿಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ಅವ್ಯಾಹತವಾಗಿ ಅಕ್ರಮ ಮೀನುಗಾರಿಕೆ ನಡೆಯುವುದರಿಂದ, ಅದನ್ನು ತಡೆಯಲೇಬೇಕು ಎಂದು ಸಚಿವ ಪಿಯೂಷ್‌ ಗೋಯೆಲ್‌ ಒತ್ತಾಯಿಸಿದ್ದರು.

ಲಸಿಕೆ ಉತ್ಪಾದನೆಗೆ ಬೆಂಬಲ

ಕೋವಿಡ್-‌೧೯ ನಿಯಂತ್ರಣಕ್ಕಾಗಿ ಭಾರತ ಲಸಿಕೆಗಳನ್ನು ಉತ್ಪಾದಿಸುತ್ತಿದೆ. ಜತೆಗೆ ಹಲವು ಅಭಿವೃದ್ಧಿಶೀಲ ದೇಶಗಳಿಗೆ ರಫ್ತು ಮಾಡಿ ಸಹಕರಿಸುತ್ತಿವೆ. ಏಕೆಂದರೆ ಅಂಥ ದೇಶಗಳಲ್ಲಿ ಕೋವಿಡ್‌ ಲಸಿಕೆ ತಯಾರಿಸುವ ಮೂಲಸೌಕರ್ಯ ಮತ್ತು ತಂತ್ರಜ್ಞಾನವಿಲ್ಲ. ಆದ್ದರಿಂದ ಕೋವಿಡ್‌ ಲಸಿಕೆ ಉತ್ಪಾದನೆ ಮತ್ತು ರಫ್ತಿಗೆ ತೊಂದರೆ ಆಗಕೂಡದು ಎಂದು ಭಾರತ ಒತ್ತಾಯಿಸಿತ್ತು. ಈ ವಾದಕ್ಕೂ ಸಹಮತ ಲಭಿಸಿದೆ.

ಭಾರತ ಮತ್ತು ಇತರ ರಾಷ್ಟ್ರಗಳು ಕೋವಿಡ್‌ ಲಸಿಕೆಯನ್ನು ವ್ಯಾಪಕವಾಗಿ ಉತ್ಪಾದಿಸಲು ಡಬ್ಲ್ಯುಟಿಒ ಅಡಿಯಲ್ಲಿನ ಟ್ರಿಪ್ಸ್‌ ಮನ್ನಾ ( TRIPS waiver) ಒಪ್ಪಂದವನ್ನು ಜಾರಿಗೊಳಿಸಬೇಕು ಎಂಬ ನಿರ್ಣಯಕ್ಕೆ ಅವಿರೋಧ ಸಹಮತ ಲಭಿಸಿತು ಎಂದು ಗೋಯೆಲ್‌ ತಿಳಿಸಿದರು. ಇದರ ಪರಿಣಾಮ ಲಸಿಕೆ ರಫ್ತಿಗೆ ಇರುವ ನಿರ್ಬಂಧಗಳು ತೆರವಾಗಲಿದೆ. ಲೈಸೆನ್ಸ್‌ ನಿಯಮಗಳು ಸಡಿಲವಾಗಲಿದೆ. ಅಮೆರಿಕ, ಯುರೋಪ್‌, ದಕ್ಷಿಣ ಆಫ್ರಿಕಾ ಮತ್ತು ಭಾರತದ ಸಮಾಲೋಚನೆ ಬಳಿಕ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಇ-ಕಾಮರ್ಸ್‌ ಮೊರಟೋರಿಯಂ

ಇ-ಕಾಮರ್ಸ್‌ ಮೊರಟೋರಿಯಂ ಅನ್ನು ಡಬ್ಯುಟಿಒ ಅಡಿಯಲ್ಲಿ 1980ರಿಂದಲೂ ಮುಂದುವರಿಸುತ್ತಾ ಬಂದಿರುವುದರ ಬಗ್ಗೆ ಭಾರತೀಯ ಐಟಿ ಹಾಗೂ ಎಲೆಕ್ಟ್ರಾನಿಕ್ಸ್‌ ಕಂಪನಿಗಳು ಆತಂಕ ವ್ಯಕ್ತಪಡಿಸಿದ್ದವು. ಈ ಕಳವಳವನ್ನು ಭಾರತ ಸಭೆಯಲ್ಲಿ ಒತ್ತಿ ಹೇಳಿತ್ತು. ” ಇ-ಕಾಮರ್ಸ್‌ ಮೊರಟೋರಿಯಂ ಪ್ರತಿ ಎರಡು ವರ್ಷಕ್ಕೊಮ್ಮೆ ವಿಸ್ತರಣೆಯಾಗುತ್ತಿತ್ತು. ಆದರೆ ಯಾವುದೇ ಕೆಲಸ ಆಗುತ್ತಿರಲಿಲ್ಲ. ದೃಢ ನಿರ್ಧಾರ ಆಗುತ್ತಿರಲಿಲ್ಲ. ಇದನ್ನು ನಿಲ್ಲಿಸುವ ಬಗ್ಗೆ ಸ್ಪಷ್ಟತೆ ಬೇಕಿತ್ತು. ಈ ಸಲ ಮತ್ತೆ ಮೊರಟೋರಿಯಂ ವಿಸ್ತರಣೆಯಾಗಿದ್ದರೂ, 2023ರ ಮಾರ್ಚ್‌ 24ರ ಗಡುವು ಹಾಕಿಕೊಳ್ಳಲಾಗಿದೆ ಎಂದು ಪಿಯೂಷ್‌ ಗೋಯೆಲ್‌ ಹೇಳಿದ್ದಾರೆ. ಹೀಗಾಗಿ ಈ ವಿವಾದ ಬಗೆಹರಿಯುವ ವಿಶ್ವಾಸ ಇದೆ ಎಂದಿದ್ದಾರೆ. ಇ-ಕಾಮರ್ಸ್‌ ಮೊರಟೋರಿಯಂ ಅನ್ನು ಡಬ್ಲ್ಯುಟಿಒ ಅಡಿಯಲ್ಲಿ 1998ರಲ್ಲಿ ಕೈಗೊಳ್ಳಲಾಗಿತ್ತು. ಇದರ ಪ್ರಕಾರ ಸದಸ್ಯ ರಾಷ್ಟ್ರಗಳು ಇ-ಕಾಮರ್ಸ್‌ ವಲಯದ ಎಲೆಕ್ಟ್ರಾನಿಕ್‌ ಟ್ರಾನ್ಸ್‌ಮಿಶನ್‌ಗಳಿಗೆ ( ಎಲೆಕ್ಟ್ರಾನಿಕ್ ವರ್ಗಾವಣೆ) ಕಸ್ಟಮ್ಸ್‌ ಸುಂಕ ವಿಧಿಸುವಂತಿಲ್ಲ. ಹೀಗಾಗಿ ಪಾಶ್ಚಿಮಾತ್ಯ ದೇಶಗಳ ಇ-ಕಾಮರ್ಸ್‌ ದಿಗ್ಗಜ ಕಂಪನಿಗಳ ಎಲೆಕ್ಟ್ರಾನಿಕ್‌ ಟ್ರಾನ್ಸ್‌ಮಿಶನ್‌ಗಳ ಮೇಲೆ ಕಸ್ಟಮ್ಸ್‌ ಸುಂಕ ವಿಧಿಸಲು ಭಾರತ ಸೇರಿದಂತೆ ಸದಸ್ಯ ರಾಷ್ಟ್ರಗಳಿಗೆ ಆಗುತ್ತಿಲ್ಲ.

ಆಹಾರ ಭದ್ರತೆ

ವಿಶ್ವ ಆಹಾರ ಕಾರ್ಯಕ್ರಮದ ಮೂಲಕ ಬಡ ರಾಷ್ಟ್ರಗಳಿಗೆ ಸಹಕರಿಸಬೇಕು ಎಂಬ ಭಾರತದ ನಿಲುವಿಗೆ ವ್ಯಾಪಕ ಬೆಂಬಲ ಲಭಿಸಿದೆ.

೯ ವರ್ಷಗಳ ಬಳಿಕ ಒಪ್ಪಂದ

ಡಬ್ಯುಟಿಒ ಅಡಿಯಲ್ಲಿ 2013ರ ಬಳಿಕ ಮೊದಲ ಸಲ ಮೀನುಗಾರಿಕೆಗೆ ಸಬ್ಸಿಡಿ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿ ಒಪ್ಪಂದಗಳಿಗೆ ಅಂಕಿತ ಬಿದ್ದಿದೆ.

Exit mobile version