ಮುಂಬೈ: ದೇಶದ ಖ್ಯಾತ ಹೂಡಿಕೆದಾರ, ಉದ್ಯಮಿ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಅವರ ಪತ್ನಿ ರೇಖಾ ಜುಂಜುನ್ವಾಲಾ (Rekha Jhunjhunwala) ಅವರು ಟೈಟಾನ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರಿಂದ 800 ಕೋಟಿ ರೂ.ಗಿಂತ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಟೈಟಾನ್ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳನ್ನು ಬಹಿರಂಗಪಟಿಸಿದ ನಂತರ ಕಂಪನಿಯ ಷೇರು ಇಂದು (ಮೇ 6) ಶೇ. 5ಕ್ಕಿಂತ ಹೆಚ್ಚು ಕುಸಿದಿದೆ.
ರೇಖಾ ಜುಂಜುನ್ವಾಲಾ ಅವರು 2024ರ ಮಾರ್ಚ್ 31ರ ವೇಳೆಗೆ ಟಾಟಾ ಗ್ರೂಪ್ ಸಂಸ್ಥೆಯಲ್ಲಿ ಶೇಕಡಾ 5.35ರಷ್ಟು ಪಾಲನ್ನು ಹೊಂದಿದ್ದರು. ಅಂದರೆ ಇದರ ಮೌಲ್ಯ 16,792 ಕೋಟಿ ರೂ. ಇಂದಿನ ವಹಿವಾಟಿನಲ್ಲಿ ಟೈಟಾನ್‌ನ ಮಾರುಕಟ್ಟೆ ಮೌಲ್ಯ 3,13,868 ಕೋಟಿ ರೂ.ಗಳಿಂದ ಕೆಳಗಿಳಿದು 2,98,815 ಕೋಟಿ ರೂ.ಗೆ ತಲುಪಿದೆ. ಈ ಕಾರಣದಿಂದಾಗಿ ರೇಖಾ ಜುಂಜುನ್ವಾಲಾ ಅವರ ಹೂಡಿಕೆ ಮೌಲ್ಯವು 805 ಕೋಟಿ ರೂ.ಗಳಷ್ಟು ಕಡಿಮೆಯಾಗಿ 15,986 ಕೋಟಿ ರೂ.ಗೆ ತಲುಪಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಗಳಲ್ಲಿನ ಚಂಚಲತೆ ಮತ್ತು ಸ್ಪರ್ಧಾತ್ಮಕ ತೀವ್ರತೆಯು ಟೈಟಾನ್‌ನ ಲಾಭಾಂಶದ ಮೇಲೆ ಪರಿಣಾಮ ಬೀರುತ್ತದೆ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಯಾರು ಈ ರೇಖಾ ಜುಂಜುನ್‌ವಾಲಾ?
ರಾಕೇಶ್ ಜುಂಜುನ್‌ವಾಲಾ ಅವರು ದೇಶದ ಖ್ಯಾತ ಹೂಡಿಕೆದಾರರು. ಷೇರು ಮಾರುಕಟ್ಟೆಯ ಬಿಗ್ ಬುಲ್, ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿಯಾಗಿದ್ದ ಅವರು 2022ರಲ್ಲಿ ನಿಧನರಾದರು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ಮಗನಾಗಿದ್ದ ಜುಂಜುನ್‌ವಾಲಾ ಅವರು ಕೇವಲ 5 ಸಾವಿರ ರೂ. ಹೂಡಿಕೆಯಿಂದ ಷೇರು ವ್ಯವಹಾರವನ್ನು ಆರಂಭಿಸಿ, ಅಂತಿಮವಾಗಿ ಷೇರು ಪೇಟೆಯ ಸರದಾರರಾಗಿ 5.8 ಶತಕೋಟಿ ಡಾಲರ್ (ಸುಮಾರು 45 ಸಾವಿರ ಕೋಟಿ ರೂ.) ಸಂಪತ್ತಿಗೆ ಒಡೆಯರಾಗಿದ್ದರು. ಸದ್ಯ, ರೇಖಾ ಜುಂಜುನ್ವಾಲಾ ಅವರ ಆಸ್ತಿ ಮೌಲ್ಯ 58 ಸಾವಿರ ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದೆ.
2023ರ ಡಿಸೆಂಬರ್ ಕ್ವಾರ್ಟರ್‌ನಲ್ಲಿ ರೇಖಾ ಜುಂಜುನ್‌ವಾಲಾ 26 ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದು, ಇದರ ಮೌಲ್ಯ 4.9 ಬಿಲಿಯನ್ ಡಾಲರ್‌ನಷ್ಟಿತ್ತು. ಆದ್ರೆ ಇದರಲ್ಲಿ 13 ಕಂಪನಿಗಳು ಮಾತ್ರ ರೇಖಾ ಜುಂಜುನ್‌ವಾಲಾ ಎಷ್ಟು ಷೇರುಗಳನ್ನು ಹೊಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಿವೆ. ಆದರೆ ಮಾರ್ಚ್ ಕ್ವಾರ್ಟರ್‌ನಲ್ಲಿ ಇದರಲ್ಲಿ ಐದು ಕಂಪನಿಗಳ ಸ್ಟಾಕ್‌ಗಳನ್ನು ರೇಖಾ ಮಾರಾಟ ಮಾಡಿದ್ದರು.
ಟಾಟಾ ಮೋಟಾರ್ಸ್, ಇಂಡಿಯನ್ ಹೋಟೆಲ್ಸ್, ಟೈಟಾನ್, ನಜಾರಾ ಟೆಕ್ ಮತ್ತು ಡೆಲ್ಟಾ ಕಾರ್ಪ್‌ನಂತಹ ದೊಡ್ಡ ಕಂಪನಿಗಳಲ್ಲಿ ರೇಖಾ ಅವರು ಷೇರುಗಳನ್ನು ಹೊಂದಿದ್ದಾರೆ. ಜತೆಗೆ ಮಾರ್ಚ್ ಕ್ವಾರ್ಟರ್‌ನಲ್ಲಿ ತಮ್ಮ ಪೋರ್ಟ್‌ಫೊಲಿಯೊಗೆ ಕೆಎಂ ಶುಗರ್ ಮಿಲ್ಸ್ ಲಿಮಿಟೆಡ್ ಸ್ಟಾಕ್ ಸೇರಿಸಿದ್ದರು. ಈ ಕಂಪನಿಯಲ್ಲಿ ರೇಖಾ ಸುಮಾರು 5 ಲಕ್ಷ ಷೇರುಗಳನ್ನು ಅಥವಾ ಶೇಕಡಾ 0.54ರಷ್ಟು ಮೌಲ್ಯವನ್ನು ಹೊಂದಿದ್ದಾರೆ. ಇವರು ಹೂಡಿಕೆ ಮಾಡುವ ಹೆಚ್ಚಿನ ಕಂಪನಿಗಳು ಮಲ್ಟಿಬ್ಯಾಗರ್ಸ್ ರಿಟರ್ನ್ ನೀಡುತ್ತವೆ.
ಇದನ್ನೂ ಓದಿ: ಸಮುದ್ರ ಕಾಣಲ್ಲ ಎಂದು 118 ಕೋಟಿ ರೂ.ಗೆ ಎದುರಿನ ಮನೆ ಖರೀದಿಸಿದ ರೇಖಾ ಜುಂಜುನ್‌ವಾಲಾ!