ನವ ದೆಹಲಿ: ಹಲವಾರು ಆ್ಯಂಟಿಬಯೋಟಿಕ್ಸ್, ಪೇನ್‌ಕಿಲ್ಲರ್ಸ್ (ನೋವು ನಿವಾರಕ) ಔಷಧಗಳ ದರಗಳು ಶೀಘ್ರದಲ್ಲಿಯೇ ಇಳಿಕೆಯಾಗುವ (Essential Medicines) ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಈ ಕುರಿತ ಹೊಸ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 27 ಕೆಟಗರಿಯ 384 ಔಷಧಗಳು ಇವೆ. ೩೪ ಹೊಸ ಔಷಧಿಗಳನ್ನು ಪಟ್ಟಿಗೆ ಸೇರಿಸಲಾಗಿದೆ. 26 ಔಷಧಗಳನ್ನು ಕೈ ಬಿಡಲಾಗಿದೆ. ಎಚ್‌ಐವಿ, ಟಿಬಿ, ಗರ್ಭ ನಿರೋಧಕಗಳು, ಹಾರ್ಮೋನ್ ಆಧರಿತ ಔಷಧಗಳು ಅಗತ್ಯ ಔಷಧಗಳ ಪಟ್ಟಿಗೆ ಸೇರಿವೆ.
ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ಮಂಗಳವಾರ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಈ ಹೊಸ ಪಟ್ಟಿಯ ಪರಿಣಾಮ ಹಲವು ಆ್ಯಂಟಿಬಯೋಟಿಕ್ಸ್, ಪೇನ್‌ಕಿಲ್ಲರ್ಸ್ ಔಷಧಗಳ ದರ ತಗ್ಗಲಿದೆ. ಇನ್ಸುಲಿನ್ ಗ್ಲಾರ್‌ಗಿನ್, ಡಿಲಾಮನಿಡ್, ಐವರ್‌ಮೆಕ್ಟಿನ್ ಇತ್ಯಾದಿ ಔಷಧಗಳ ದರ ಕಡಿಮೆಯಾಗಲಿದೆ.
ಹೃದಯ ಕಾಯಿಲೆಯ ಚಿಕಿತ್ಸೆಗೆ ಬಳಸುವ ಔಷಧ, ಅರಿವಳಿಕೆಯ ಔಷಧಿಗಳು, ನರಗಳ ಸಮಸ್ಯೆಗೆ ಬಳಸುವ ಮದ್ದು, ಸೋಂಕು ನಿವಾರಕ ಔಷಧಿಗಳು, ಕಿವಿ, ಮೂಗು, ಗಂಟಲು, ಜಠರದ ಕಾಯಿಲೆ ಉಪಶಮನಕ್ಕೆ ಬಳಸುವ ಔಷಧಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ.
ತಂಬಾಕು ಸೇವನೆಯ ವ್ಯಸನದಿಂದ ಬಿಡಿಸಲು ಬಳಸುವ ಚಿಕಿತ್ಸೆಗಳ ಔಷಧಗಳು, ಕ್ಯಾನ್ಸರ್ ಕಾಯಿಲೆಗಳ ಉಪಶಮನಕ್ಕೆ ಉಪಯೋಗಿಸುವ ಔಷಧಗಳ ದರ ಇಳಿಕೆಯಾಗಲಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಓರಲ್ ರಿಹೈಡ್ರೇಶನ್ ಸಾಲ್ಟ್, ಪಾರಾಸಿಟಮಲ್, ರಿಬಾವಿರಿನ್, ಸ್ಟ್ರೆಪ್ಟೊಮಿಸಿನ್, ಲೋರಾಜೆಪಾಮ್ ದರ ಇಳಿಕೆ ನಿರೀಕ್ಷಿಸಲಾಗಿದೆ.
ಪಟ್ಟಿಯಿಂದ ಬ್ಲೀಚಿಂಗ್ ಪೌಡರ್ ಹೊರಕ್ಕೆ: ಅಗತ್ಯ ಔಷಧಗಳ ಪಟ್ಟಿಯಿಂದ 26 ಔಷಧಗಳನ್ನು ಕೈ ಬಿಡಲಾಗಿದೆ. ಅಲ್ಟೆಪ್ಲಾಸ್, ಅಟೆನೋಲೋಲ್, ಬ್ಲೀಚಿಂಗ್ ಪೌಡರ್, ಪ್ರೊಕಾರ್ಬಸಿನ್, ರಿಫಾಬುಟಿನ್, ರಾಂಟಿಡಿನ್, ಸುಕ್ರಾಲ್‌ಫೇಟ್, ಸಿಟ್ರಿಮಿಡ್, ಡೈಮರ್‌ಕಾಪ್ರೊಲ್, ನಿಕೋಟಿನ್‌ಮೈಡ್, ವೈಟ್ ಪೆಟ್ರೋಲಟುಮ್ ಇತ್ಯಾದಿ ಔಷಧಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.
26 ಔಷಧಗಳನ್ನು ಹೊರಗಿಟ್ಟಿರುವುದೇಕೆ?: 26 ಔಷಧಗಳನ್ನು ಸರ್ಕಾರ ಅಗತ್ಯ ಔಷಧಗಳ ಪಟ್ಟಿಯಿಂದ ಹೊರಗಿಟ್ಟಿದೆ. ಔಷಧಗಳ ಸುರಕ್ಷತೆಗೆ ಸಂಬಂಧಿಸಿ ಕಳವಳ ಇರುವುದರಿಂದ ಅವುಗಳನ್ನು ಅಗತ್ಯ ಔಷಧಗಳ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಬಳಕೆದಾರರ ಆರೋಗ್ಯದ ಹಿತದೃಷ್ಟಿಯಿಂದ ಇದು ಮಹತ್ವ ಪಡೆದಿದೆ.
ಅಗತ್ಯ ವಸ್ತುಗಳ ಪಟ್ಟಿಯಲ್ಲಿ ( National list of essential medicines) ಇರುವ ಔಷಧಗಳನ್ನು ಯುಕ್ತ ದರದಲ್ಲಿ ಹಾಗೂ ಖಾತರಿಯ ಗುಣಮಟ್ಟದೊಂದಿಗೆ ನೀಡಬೇಕಾಗುತ್ತದೆ. 1996ರಲ್ಲಿ ಮೊದಲ ಬಾರಿಗೆ ಅಗತ್ಯ ಔಷಧಗಳ ಪಟ್ಟಿ ಬಿಡುಗಡೆ ಮಾಡಿದಾಗ ಅದರಲ್ಲಿ 279 ಔಷಧಗಳು ಇತ್ತು. 2003ರಲ್ಲಿ 354 ಕ್ಕೆ ಏರಿಸಲಾಯಿತು. ಇದೀಗ 384 ಔಷಧಗಳು ಪಟ್ಟಿಯಲ್ಲಿವೆ.
ಅಗತ್ಯ ಔಷಧಗಳ ಪಟ್ಟಿಯಿಂದ ಕೈಬಿಟ್ಟ ಔಷಧಗಳು:
- Alteplase
- Atenolol
- Bleaching Powder
- Capreomycin
- Cetrimide
- Chlorpheniramine
- Diloxanide furoate
- 8. Dimercapro
- Erythromycin
- Ethinylestradiol
- Ethinylestradiol(A) + Norethisterone (B)
- Ganciclovir
- Kanamycin
- Lamivudine (A) + Nevirapine (B) + Stavudine (C)
- Leflunomide
- Methyldopa
- Nicotinamide
- Pegylated interferon alfa 2a, Pegylated interferon alfa 2b
- Pentamidine
- Prilocaine (A) + Lignocaine (B)
- Procarbazine
- Ranitidine
- Rifabutin
- Stavudine (A) + Lamivudine (B)
- Sucralfate
- White Petrolatum