ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಸಮೂಹದ ೪೫ನೇ ವಾರ್ಷಿಕ ಮಹಾ ಸಭೆಯಲ್ಲಿ (Reliance AGM) ತಮ್ಮ ಉದ್ದಿಮೆ ಸಾಮ್ರಾಜ್ಯದ ಉತ್ತರಾಧಿಕಾರಿಗಳಾಗಿ ಮೂವರು ಮಕ್ಕಳ ಪಾತ್ರದ ಬಗ್ಗೆ ಕೆಲ ವಿವರಗಳನ್ನು ನೀಡಿದ್ದಾರೆ.
ಅನಂತ್ ಅಂಬಾನಿಗೆ ಹೊಸ ಇಂಧನ ಉದ್ದಿಮೆ
ಮುಕೇಶ್ ಅಂಬಾನಿಯವರ ಮೂವರು ಮಕ್ಕಳಲ್ಲಿ ಆಕಾಶ್ ಮತ್ತು ಇಶಾ ಅಂಬಾನಿ ಅವಳಿ ಮಕ್ಕಳಾಗಿದ್ದರೆ, ಕಿರಿಯ ಪುತ್ರ ಅನಂತ್ ಅಂಬಾನಿ. ಆಕಾಶ್ ಅಂಬಾನಿ ರಿಲಯನ್ಸ್ ಸಮೂಹದ ಟೆಲಿಕಾಂ ಉದ್ದಿಮೆಯ ಸಾರಥ್ಯವನ್ನು ವಹಿಸಿದ್ದಾರೆ. ಇಶಾ ಅಂಬಾನಿ ರಿಟೇಲ್ ಬಿಸಿನೆಸ್ ನೇತೃತ್ವ ವಹಿಸಿದ್ದಾರೆ. ಅನಂತ್ ಅಂಬಾನಿ ಹೊಸ ಇಂಧನ ಬಿಸಿನೆಸ್ ನೇತೃತ್ವ ವಹಿಸಿದ್ದಾರೆ. ಹಾಗೂ ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಎಂದು ಮುಕೇಶ್ ಅಂಬಾನಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
” ನಮ್ಮ ಮುಂದಿನ ಪೀಳಿಗೆಯ ನಾಯಕರು ತಮ್ಮ ಬಿಸಿನೆಸ್ ಅನ್ನು ಆತ್ಮವಿಶ್ವಾಸದಿಂದ ನಿರ್ವಹಿಸುತ್ತಿದ್ದಾರೆ. ಆಕಾಶ್ ಮತ್ತು ಇಶಾ ಅನುಕ್ರಮವಾಗಿ ರಿಲಯನ್ಸ್ ಜಿಯೊ ಮತ್ತು ರಿಲಯನ್ಸ್ ರಿಟೇಲ್‌ನಲ್ಲಿ ನಾಯಕತ್ವ ವಹಿಸಿದ್ದಾರೆ. ಅನಂತ್ ಕೂಡ ಅತ್ಯಂತ ಉತ್ಸಾಹದಿಂದ ಹೊಸ ಇಂಧನ ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ಮುಕೇಶ್ ಅಂಬಾನಿ ಹೇಳಿದರು.
ಧೀರೂಭಾಯಿಯವರ ಉತ್ಸಾಹ
ನಾನು ಧೀರೂಭಾಯಿ ಅವರ ಉತ್ಸಾಹವನ್ನು ಆಕಾಶ್, ಇಶಾ ಮತ್ತು ಅನಂತ್ ಅವರಲ್ಲಿ ಕಾಣುತ್ತಿದ್ದೇನೆ. ಹೀಗಾಗಿ ಭವಿಷ್ಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಪ್ರಬಲ ನಾಯಕರ ಸಾರಥ್ಯದಲ್ಲಿ ಮುನ್ನಡೆಯಲಿದೆ. ಬೆಳೆಯುವ ಯಾವುದೇ ಸಮೂಹಕ್ಕೆ ಇಂಥ ಉತ್ಸಾಹಿ ಯುವ ನಾಯಕತ್ವದ ಅಗತ್ಯ ಇರುತ್ತದೆ. ರಿಲಯನ್ಸ್ ಸಮೂಹ ಅಂಥ ಯುವ ನಾಯಕತ್ವದೊಂದಿಗೆ ಭವಿಷ್ಯದಲ್ಲಿ ಮತ್ತಷ್ಟು ಉಜ್ವಲವಾಗಿ ಬೆಳೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದರು.
ಇದನ್ನೂ ಓದಿ: Reliance AGM | ದಿನಬಳಕೆ ವಸ್ತುಗಳ ಬಿಸಿನೆಸ್‌ಗೂ ರಿಲಯನ್ಸ್ ಭರ್ಜರಿ ಎಂಟ್ರಿ!