ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಈ ವರ್ಷ ಎಫ್‌ಎಂಸಿಜಿ ( Fast-moving consumer business) ವಲಯದಲ್ಲಿ ವಹಿವಾಟು ಆರಂಭಿಸಲಿದೆ ಎಂದು ರಿಲಯನ್ಸ್ ರಿಟೇಲ್ ವೆಂಚರ್ಸ್‌ನ ನಿರ್ದೇಶಕಿ ಇಶಾ ಅಂಬಾನಿ ಘೋಷಿಸಿದ್ದಾರೆ.
ಕೈಗೆಟಕುವ ದರದಲ್ಲಿ ವಸ್ತುಗಳ ಮಾರಾಟ
ಇದರೊಂದಿಗೆ ರಿಲಯನ್ಸ್ ರಿಟೇಲ್ ಎಫ್‌ಎಂಸಿಜಿ ಕ್ಷೇತ್ರದ ದಿಗ್ಗಜಗಳಾದ ಹಿಂದುಸ್ತಾನ್ ಯುನಿಲಿವರ್, ನೆಸ್ಲೆ ಮತ್ತು ಬ್ರಿಟಾನಿಯಾಗೆ ಪೈಪೋಟಿ ನೀಡಲಿದೆ. ” ಈ ವರ್ಷ ನಾವು ಎಫ್‌ಎಂಸಿಜಿ ಬಿಸಿನೆಸ್ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದೇವೆ. ಭಾರತೀಯರು ದಿನ ನಿತ್ಯ ಬಳಸುವ ಅನೇಕ ಉತ್ಪನ್ನಗಳನ್ನು ಕೈಗೆಟಕುವ ದರದಲ್ಲಿ ಒದಗಿಸಲು ಸಿದ್ಧರಾಗಿದ್ದೇವೆʼʼ ಎಂದು ಇಶಾ ಅಂಬಾನಿ ಅವರು ಗ್ರೂಪ್‌ನ ೪೫ನೇ ಎಜಿಎಂನಲ್ಲಿ ತಿಳಿಸಿದರು.
ಭಾರತದ ಸಮೃದ್ಧ ಸಂಸ್ಕೃತಿ ಮತ್ತು ಜಾನಪದದ ಸಂರಕ್ಷಣೆಗೆ ನಾವು ಬದ್ಧರಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಪಾರಂಪರಿಕ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತೇವೆ. ರಿಲಯನ್ಸ್ ರಿಟೇಲ್ ೨,೫೦೦ ಮಳಿಗೆಗಳನ್ನು ಕಳೆದೊಂದು ವರ್ಷದಲ್ಲಿ ತೆರೆದಿದ್ದು, ಒಟ್ಟು ಮಳಿಗೆಗಳ ಸಂಖ್ಯೆ ೧೫,೦೦೦ಕ್ಕೆ ಏರಿದೆ. ಕಳೆದೊಂದು ವರ್ಷದಲ್ಲಿ ೧.೫೦ ಲಕ್ಷ ಮಂದಿಗೆ ಉದ್ಯೋಗ ನೀಡಿದ್ದೇವೆ. ಒಟ್ಟು ಉದ್ಯೋಗಿಗಳ ಸಂಖ್ಯೆ ೩,೬೦,೦೦೦ಕ್ಕೆ ಏರಿಕೆಯಾಗಿದೆ ಎಂದರು.
ರಿಲಯನ್ಸ್ ರಿಟೇಲ್ ದಾಖಲೆಯ ೨ ಲಕ್ಷ ಕೋಟಿ ರೂ. ವಹಿವಾಟು ನಡೆಸಿದೆ. ಇದು ಈಗ ಏಷ್ಯಾದ ಟಾಪ್ ೧೦ ರಿಟೇಲ್ ಕಂಪನಿಗಳಲ್ಲಿ ಒಂದಾಗಿದೆ ಎಂದು ವಿವರಿಸಿದರು.
ಏನಿದು ಎಫ್‌ಎಂಸಿಜಿ ಬಿಸಿನೆಸ್?: ತ್ವರಿತವಾಗಿ ಮಾರಾಟವಾಗುವ ಹಾಗೂ ದಿನ ನಿತ್ಯ ಬಳಕೆಯ ಉತ್ಪನ್ನಗಳ ಮಾರಾಟವನ್ನು ಎಫ್‌ಎಂಸಿಜಿ ಬಿಸಿನೆಸ್ (Fast-moving consumer goods) ಎನ್ನುತ್ತಾರೆ. ಉದಾಹರಣೆಗೆ ಹಾಲಿನ ಉತ್ಪನ್ನಗಳು, ಬಿಸ್ಕತ್, ತರಕಾರಿ, ಹಣ್ಣು ಹಂಪಲು, ಟೂತ್‌ಪೇಸ್ಟ್, ಸೋಪು ಇತ್ಯಾದಿ ಎಫ್‌ಎಂಸಿಜಿ ವರ್ಗದ ಉತ್ಪ್ನನಗಳು. ಇವುಗಳ ಮಾರಾಟದಲ್ಲಿ ಲಾಭಾಂಶ ಕಡಿಮೆಯಾದರೂ, ಹೆಚ್ಚಿನ ಪ್ರಮಾಣದಲ್ಲಿ ಹಾಗೂ ತ್ವರಿತ ಗತಿಯಲ್ಲಿ ವಿಕ್ರಯವಾಗುತ್ತವೆ.