ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್‍ನ ಆದಾಯ 2021-22ರಲ್ಲಿ 100 ಶತಕೋಟಿ ಡಾಲರ್ ಗಳ (7.9 ಲಕ್ಷ ಕೋಟಿ ರೂ.) ಗಡಿಯನ್ನು ದಾಟಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಕಂಪನಿಯಾಗಿದೆ.
ತೈಲ ಸಂಸ್ಕರಣೆಯಿಂದ ರಾಸಾಯನಿಕ, ಟೆಲಿಕಾಂ, ರಿಟೇಲ್ ತನಕ ಹಲವಾರು ವಲಯಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತೊಡಗಿಸಿಕೊಂಡಿದೆ. ರಿಲಯನ್ಸ್ ಶುಕ್ರವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ, 2021-22ರಲ್ಲಿ 7.9 ಲಕ್ಷ ಕೋಟಿ ರೂ. ಆದಾಯ ಹಾಗೂ 67,845 ಕೋಟಿ ರೂ. ಲಾಭ ಗಳಿಸಿರುವುದಾಗಿ ತಿಳಿಸಿದೆ. 2020-21ಕ್ಕೆ ಹೋಲಿಸಿದರೆ ಶೇ.47ರಷ್ಟು ಪ್ರಗತಿ ದಾಖಲಿಸಿದೆ. ಇದರೊಂದಿಗೆ ಭಾರತದಲ್ಲಿ ಕಳೆದ ಸಾಲಿನಲ್ಲಿ ಅತ್ಯಧಿಕ ಲಾಭ ಗಳಿಸಿರುವ ಕಂಪನಿಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಹೊರಹೊಮ್ಮಿದೆ. ಕಂಪನಿಯ ಸಮೂಹಗಳ ಪೈಕಿ ಟಾಟಾ ಗ್ರೂಪ್‍ನ 10 ವಲಯಗಳ 30 ಕಂಪನಿಗಳು 2021-22ರಲ್ಲಿ 103 ಶತಕೋಟಿ ಡಾಲರ್ ಆದಾಯ ಗಳಿಸಿತ್ತು. ಆದರೆ ಕಂಪನಿಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಮೊದಲ 100 ಬಿಲಿಯನ್ ಡಾಲರ್ ಆದಾಯದ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದೆ.
“ಕೋವಿಡ್ ಬಿಕ್ಕಟ್ಟಿನ ಸವಾಲುಗಳ ಹೊರತಾಗಿಯೂ ರಿಲಯನ್ಸ್ ಇಂಡಸ್ಟ್ರೀಸ್ 2021-22ರಲ್ಲಿ ಅತ್ಯುತ್ತಮ ಪ್ರಗತಿ ದಾಖಲಿಸುವಲ್ಲಿ ಯಶಸ್ವಿಯಾಗಿದೆ” ಎಂದು ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ತೈಲ ಸಂಸ್ಕರಣೆಯಲ್ಲಿ ಹೆಚ್ಚು ಲಾಭ
ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಕೆಲವು ವರ್ಷಗಳಿಂದ ರಿಟೇಲ್ ಮತ್ತು ಟೆಲಿಕಾಂ ವಲಯದಲ್ಲಿ ಜಿಯೊ ಮೂಲಕ ವಹಿವಾಟು ನಡೆಸುತ್ತಿದ್ದರೂ, ಈಗಲೂ ಅತಿ ಹೆಚ್ಚು ಲಾಭದಾಯಕ ಉದ್ದಿಮೆ ತೈಲ ಸಂಸ್ಕರಣೆ ಹಾಗೂ ರಾಸಾಯನಿಕ ಉತ್ಪನ್ನಗಳ ಮಾರಾಟವಾಗಿದೆ. ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ರಿಲಯನ್ಸ್ ಲಾಭ ಶೇ.20ರಷ್ಟು ಹೆಚ್ಚಳವಾಗಿತು. 18,021 ಕೋಟಿ ರೂ.ಗೆ ಜಿಗಿದಿತ್ತು. 2021-22ರಲ್ಲಿ ಒಟ್ಟು 67,845 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ರಿಟೇಲ್ ಬಿಸಿನೆಸ್‌ನಲ್ಲಿ ವಾರ್ಷಿಕ ಆದಾಯ 2 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಡಿಜಿಟಲ್ ಬಿಸಿನೆಸ್‌ನಲ್ಲಿ ವಾರ್ಷಿಕ ಆದಾಯ 1 ಲಕ್ಷ ಕೋಟಿ ರೂ. ದಾಟಿದೆ.
ಜಿಯೊಗೆ 4,173 ಕೋಟಿ ರೂ. ನಿವ್ವಳ ಲಾಭ
ರಿಲಯನ್ಸ್ ಜಿಯೊ 2021-22ರ ಜನವರಿ-ಮಾರ್ಚ್ ಅವಧಿಯಲ್ಲಿ4,173 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2021-22ರ ಇಡೀ ಸಾಲಿನಲ್ಲಿ 95,804 ಕೋಟಿ ರೂ. ಆದಾಯ ಗಳಿಸಿದೆ. 2020-21ಕ್ಕೆ ಹೋಲಿಸಿದರೆ ಶೇ.17 ಏರಿಕೆಯಾಗಿದೆ. ಜಿಯೊ ಗ್ರಾಹಕರ ಸಂಖ್ಯೆ 2022ರ ಮಾರ್ಚ್ 31ರ ವೇಳೆಗೆ 41 ಕೋಟಿಗೆ ಏರಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಫಾರ್ಚ್ಯೂನ್ ಗ್ಲೋಬಲ್ 500 ಕಂಪನಿಯಾಗಿದ್ದು, ಇದರ ಅಧ್ಯಕ್ಷ ಮುಕೇಶ್ ಅಂಬಾನಿ ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತ ಉದ್ಯಮಿ ಎನ್ನಿಸಿದ್ದಾರೆ. ವಿಶ್ವದಲ್ಲಿ 9ನೇ ದೊಡ್ಡ ಸಿರಿವಂತರೆನಿಸಿದ್ದಾರೆ. 1957ರಲ್ಲಿ ಜನಿಸಿದ ಮುಕೇಶ್ ಅಂಬಾನಿಯವರು 1981ರಲ್ಲಿ ತಂದೆ ಧೀರೂಭಾಯಿ ಅಂಬಾನಿಯವರಿಗೆ ತಮ್ಮ ಕೌಟುಂಬಿಕ ಉದ್ಯಮದಲ್ಲಿ ಸಹಕರಿಸಲು ಆರಂಭಿಸಿದರು. ಆಗ ರಿಲಯನ್ಸ್ ಇಂಡಸ್ಟ್ರೀಸ್ ತೈಲ ಸಂಸ್ಕರಣೆ ಮತ್ತು ಪೆಟ್ರೊಕೆಮಿಕಲ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿತ್ತು. ರಿಲಯನ್ಸ್ ಸಾಮ್ರಾಜ್ಯವನ್ನು ರಿಟೇಲ್, ಟೆಲಿಕಾಂ ವಲಯದಲ್ಲಿ ವಿಸ್ತರಿಸಿದ ಹೆಗ್ಗಳಿಕೆ ಮುಕೇಶ್ ಅಂಬಾನಿ ಅವರದ್ದಾಗಿದೆ. ರಿಲಯನ್ಸ್ ರಿಟೇಲ್ ಭಾರತದ ಅತಿ ದೊಡ್ಡ ರಿಟೇಲರ್ ಆಗಿದೆ.
ಅನಿಲ್ ಅಂಬಾನಿ ಹಿನ್ನಡೆ
ಫೋರ್ಬ್ಸ್ ಪಟ್ಟಿಯಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸತತವಾಗಿ ಭಾರತದ ನಂ.1 ಸಿರಿವಂತರೆನಿಸಿದ್ದರು. ಗುಜರಾತ್‌ನ ಜಾಮ್ ನಗರದಲ್ಲಿ ವಿಶ್ವದ ಅತಿ ದೊಡ್ಡ ಪೆಟ್ರೋಲಿಯಂ ಸಂಸ್ಕರಣೆ ಘಟಕವನ್ನು ಅಂಬಾನಿಯವರು ಅಭಿವೃದ್ಧಿಪಡಿಸಿದ್ದಾರೆ. ಮುಕೇಶ್ ಅಂಬಾನಿಯವರ ಮಕ್ಕಳಾದ ಆಕಾಶ್, ಅನಂತ್, ಇಶಾ ಅಂಬಾನಿ ಈಗಾಗಲೇ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಕಂಪನಿಗಳ ನಿರ್ದೇಶಕರುಗಳ ಮಂಡಳಿಗಳಲ್ಲಿ ಸಕ್ರಿಯರಾಗಿದ್ದಾರೆ. ಮುಕೇಶ್ ಅಂಬಾನಿಯವರ ಕಿರಿಯ ಸೋದರ ಅನಿಲ್ ಅಂಬಾನಿ ಅವರು 2006ರಲ್ಲಿ ಕೌಟುಂಬಿಕ ಉದ್ದಿಮೆಯ ತಮ್ಮ ಪಾಲನ್ನು ಗಳಿಸಿದರೂ, ಉದ್ಯಮಿಯಾಗಿ ನಿರೀಕ್ಷಿತ ಯಶಸ್ಸನ್ನು ಕಾಣಲಿಲ್ಲ. 2020ರ ಫೆಬ್ರವರಿಯಲ್ಲಿ ಬ್ರಿಟನ್‌ನ ಕೋರ್ಟ್, ಅನಿಲ್ ಅಂಬಾನಿ ಅವರನ್ನು ದಿವಾಳಿಯಾಗಿದ್ದಾರೆ ಎಂದು ಘೋಷಿಸಿತ್ತು. 2004-2006ರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು. ರಿಲಯನ್ಸ್ ಎಡಿಎ ಗ್ರೂಪ್ ಇವರ ನೇತೃತ್ವದ ರಿಲಯನ್ಸ್ ಬಣವಾಗಿದೆ. ರಿಲಯನ್ಸ್ ಪವರ್, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಎಂಟರ್‌ಟೈನ್‌ಮೆಂಟ್, ರಿಲಯನ್ಸ್ ಹೆಲ್ತ್ ಈ ಗ್ರೂಪ್‌ನಲ್ಲಿವೆ. ಹೀಗೆ ಅಣ್ಣ ಮುಕೇಶ್ ಅಂಬಾನಿಯವರು ಉದ್ದಿಮೆಯಲ್ಲಿ ಅಪೂರ್ವ ಸಾಧನೆ ಮಾಡುವಲ್ಲಿ ಯಶಸ್ವಿಯಾದರೂ, ಅನಿಲ್ ಅಂಬಾನಿಯವರು ಹಿನ್ನಡೆ ಅನುಭವಿಸಿದ್ದಾರೆ.