ಮುಂಬಯಿ: ರಿಲಯನ್ಸ್ ಜಿಯೊ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇತ್ತೀಚೆಗೆ 3,720 ಕೋಟಿ ರೂ. ಠೇವಣಿಯನ್ನು ಜಮೆ ಮಾಡಿದೆ. ಇದಕ್ಕೆ ಕಾರಣವೂ ಇದೆ. ರಿಲಯನ್ಸ್ ಇನ್‌ಫ್ರಾಟೆಲ್ ಕಂಪನಿಯ ಮೊಬೈಲ್ ಗೋಪುರ ಮತ್ತು ಫೈಬರ್ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಿಯೊ ಮುಂದಾಗಿದೆ. ಈ ಸಂಬಂಧ 3,720 ಕೋಟಿ ರೂ.ಗಳನ್ನು ಎಸ್‌ಬಿಐನ ಖಾತೆಯಲ್ಲಿ ಇಟ್ಟಿದೆ. (Reliance Jio) ಇದರೊಂದಿಗೆ ಉದ್ಯಮದಲ್ಲಿ ತೀವ್ರ ನಷ್ಟ ಹಾಗೂ ಸಾಲಸೋಲದಲ್ಲಿ ಸಿಲುಕಿದ್ದ ತಮ್ಮ ಅನಿಲ್ ಅಂಬಾನಿಗೆ ನೆರವಾದಂತಾಗಿದೆ. ಅನಿಲ್ ಅಂಬಾನಿಗೆ ಬ್ಯಾಂಕ್ ಸಾಲವನ್ನು ತೀರಿಸಲು ಈಗ ಅನುಕೂಲವಾಗಲಿದೆ.
ಕಂಪನಿಗಳ ರಾಷ್ಟ್ರೀಯ ನ್ಯಾಯಾಧೀಕರಣವು (NCLT) ಮುಕೇಶ್ ಅಂಬಾನಿಯವರ ಜಿಯೊಗೆ, ನಷ್ಟದಲ್ಲಿದ್ದ ಅನಿಲ್ ಅಂಬಾನಿಯವರ ರಿಲಯನ್ಸ್ ಇನ್‌ಫ್ರಾಟೆಲ್ ಕಂಪನಿಯನ್ನು (Reliance Infratel ) ಖರೀದಿಸಲು ಅನುಮತಿ ನೀಡಿತ್ತು. 2019ರ ನವೆಂಬರ್‌ನಲ್ಲಿ ಜಿಯೊ, ರಿಲಯನ್ಸ್ ಇನ್‌ಫ್ರಾಟೆಲ್‌ನ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು 3,720 ಕೋಟಿ ರೂ.ಗಳ ಬಿಡ್ ಸಲ್ಲಿಸಿತ್ತು. ಹೀಗಾಗಿ ನ್ಯಾಯಾಧೀಕರಣವು 3,720 ಕೋಟಿ ರೂ.ಗಳನ್ನು ಎಸ್‌ಬಿಐನಲ್ಲಿ ಠೇವಣಿ ಇಡಲು ಸೂಚಿಸಿತ್ತು.
ರಿಲಯನ್ಸ್ ಇನ್‌ಫ್ರಾಟೆಲ್ 1.78 ಲಕ್ಷ ಕಿ.ಮೀ ಉದ್ದದ ಫೈಬರ್ ಅಸೆಟ್‌ಗಳನ್ನು ಹೊಂದಿದೆ. 43,540 ಮೊಬೈಲ್ ಗೋಪುರಗಳನ್ನು ಹೊಂದಿದೆ.
ಈ ಹಿಂದೆ 2019ರಲ್ಲಿ ಎರಿಕ್ಸನ್ ಕಂಪನಿಗೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ 453 ಕೋಟಿ ರೂ.ಗಳನ್ನು ಅನಿಲ್ ಅಂಬಾನಿ ನೀಡಬೇಕಿತ್ತು. ಅದು ಸಾಧ್ಯವಾಗದಿದ್ದರೆ ಮೂರು ತಿಂಗಳು ಜೈಲು ವಾಸ ಎದುರಿಸಬೇಕಾಗಿತ್ತು. ಆಗ ಮುಕೇಶ್ ಅಂಬಾನಿಯವರು ಬಾಕಿ ಮೊತ್ತ ತೀರಿಸಲು ಸಹಕರಿಸಿದ್ದರು.