Site icon Vistara News

Reliance Jio Q4 Results: ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Reliance Jio

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (RIL) ಅಂಗಸಂಸ್ಥೆ ರಿಲಯನ್ಸ್‌ ಜಿಯೊ ಇನ್ಫೊಕಾಮ್‌ ಲಿಮಿಟೆಡ್‌ನ ಲಾಭವು 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 13.16ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ (Reliance Jio Q4 Results).

ಕಂಪನಿಯು 2022-23ನೇ ಹಣಕಾಸು ವರ್ಷದ ಮಾರ್ಚ್‌ 31ಕ್ಕೆ ಕೊನೆಗೊಂಡ ಮೂರು ತಿಂಗಳ ಅವಧಿಯಲ್ಲಿ 4,716 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ 2023-24ನೇ ಹಣಕಾಸು ವರ್ಷದ ಮಾರ್ಚ್‌ 31ಕ್ಕೆ ಕೊನೆಗೊಂಡ ಮೂರು ತಿಂಗಳ ಅವಧಿಯಲ್ಲಿ ನಿವ್ವಳ ಲಾಭ ಶೇಕಡ 13.16ರಷ್ಟು ಹೆಚ್ಚಾಗಿ 5,337 ಕೋಟಿ ರೂ.ಗೆ ಏರಿಕೆ ಆಗಿದೆ.

2023-24ನೇ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಲಾಭ ಶೇ 12.4ರಷ್ಟು ಹೆಚ್ಚಾಗಿ 20,607 ಕೋಟಿ ರೂ.ಗೆ ತಲುಪಿದೆ. 2022-23ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ 18,299 ಕೋಟಿ ರೂ.ಯಷ್ಟಿತ್ತು. ಕಂಪೆನಿಯ ವರಮಾನ 2022-23ನೇ ಹಣಕಾಸು ವರ್ಷದಲ್ಲಿ 91,373 ಕೋಟಿ ರೂ. ಇತ್ತು. ಇದಕ್ಕೆ ಹೋಲಿಸಿದರೆ 2023-24ನೇ ಹಣಕಾಸು ವರ್ಷದಲ್ಲಿ ಶೇ. 10ರಷ್ಟು ಹೆಚ್ಚಾಗಿ 1,00,891 ಕೋಟಿ ರೂ.ಗೆ ಏರಿಕೆ ಕಂಡಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಅಂಕಿಅಂಶಗಳ ಪ್ರಕಾರ, ಕಂಪೆನಿ ಜನವರಿಯಲ್ಲಿ 4,170,000 ಮತ್ತು ಫೆಬ್ರವರಿಯಲ್ಲಿ 3,590,000 ಚಂದಾದಾರರನ್ನು ಹೊಂದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಡಿ. ಅಂಬಾನಿ ಮಾತನಾಡಿ, “ತೆರಿಗೆ ಪೂರ್ವ ಲಾಭದಲ್ಲಿ 100,000 ಕೋಟಿ ರೂ.ಗಳ ಮಿತಿಯನ್ನು ದಾಟಿದ ಮೊದಲ ಭಾರತೀಯ ಕಂಪೆನಿ ರಿಲಯನ್ಸ್ʼʼ ಎಂದು ಹೇಳಿದ್ದಾರೆ.

ವಿಪ್ರೋದ ನಿವ್ವಳ ಲಾಭದಲ್ಲಿ ಶೇ. 8ರಷ್ಟು ಕುಸಿತ

ಐಟಿ ದೈತ್ಯ ವಿಪ್ರೋ (Wipro)ದ ಮಾರ್ಚ್ 2024 ತ್ರೈಮಾಸಿಕದ (ನಾಲ್ಕನೇ ತ್ರೈ ಮಾಸಿಕ) ನಿವ್ವಳ ಲಾಭ ಶೇ. 8ರಷ್ಟು ಕುಸಿತ ಕಂಡು 2,835 ಕೋಟಿ ರೂ.ಗೆ ತಲುಪಿದೆ ಎಂದು ವರದಿ ತಿಳಿಸಿದೆ. 2024ರ ಜನವರಿ-ಮಾರ್ಚ್ ಅವಧಿಯಲ್ಲಿ ವಿಪ್ರೋದ ಆದಾಯ 22,208.3 ಕೋಟಿ ರೂ.ಗೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 23,190.3 ಕೋಟಿ ರೂ. ಆದಾಯ ಇತ್ತು.

ಕಳೆದ ವರ್ಷ ಇದೇ ಅವಧಿಯಲ್ಲಿ ವಿಪ್ರೋ 3,074 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ವಿಪ್ರೋ ನಿರ್ದೇಶಕರ ಮಂಡಳಿಯು 1 ರೂ.ಗಳ ಮಧ್ಯಂತರ ಲಾಭಾಂಶ (ಡಿವಿಡೆಂಡ್‌)ವನ್ನು ಘೋಷಿಸಿದೆ. ಇದನ್ನು 2023-24ರ ಹಣಕಾಸು ವರ್ಷದ ಅಂತಿಮ ಲಾಭಾಂಶವೆಂದು ಪರಿಗಣಿಸಲಾಗುವುದು ಎಂದು ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಡಾಲರ್ ಲೆಕ್ಕದಲ್ಲಿ ಹೇಳುವುದಾದರೆ, ವಿಪ್ರೋದ ಐಟಿ ಸೇವೆಗಳ ಆದಾಯವು 2,657.4 ಮಿಲಿಯನ್ ಡಾಲರ್ ಆಗಿದೆ.

ಇದನ್ನೂ ಓದಿ: Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

ಜೂನ್ 30ಕ್ಕೆ ಕೊನೆಗೊಳ್ಳುವ ತ್ರೈ ಮಾಸಿಕದಲ್ಲಿ ನಮ್ಮ ಐಟಿ ಸೇವೆಗಳ ವ್ಯವಹಾರ ವಿಭಾಗದಿಂದ ಆದಾಯವು 2.62 ಬಿಲಿಯನ್ ಡಾಲರ್‌ನಿಂದ 2.67 ಬಿಲಿಯನ್ ಡಾಲರ್ ಆಸುಪಾಸಿನಲ್ಲಿರಲಿದೆ ಎನ್ನುವ ನಿರೀಕ್ಷೆ ಇದೆ. ವಿಪ್ರೋದ ಸ್ವಯಂ ಪ್ರೇರಿತ ಹೊರಗುಳಿಯುವಿಕೆಯು 12 ತಿಂಗಳ ಆಧಾರದ ಮೇಲೆ ಶೇಕಡಾ 14.2ರಷ್ಟಿದೆ. ಇದು ಹಿಂದಿನ ಡಿಸೆಂಬರ್ 2023ರ ತ್ರೈ ಮಾಸಿಕದಲ್ಲಿ ವರದಿಯಾದ ಶೇಕಡಾ 12.3ಕ್ಕಿಂತ ಹೆಚ್ಚು. 2023-24ರ ಆರ್ಥಿಕ ವರ್ಷದಲ್ಲಿ ವಿಪ್ರೋದ ಉದ್ಯೋಗಿಗಳ ಸಂಖ್ಯೆ ಶೇಕಡಾ 9.5ರಷ್ಟು ಕುಸಿದು 2,34,054ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

Exit mobile version