ಮುಂಬೈ: ರಿಲಯನ್ಸ್ ರೀಟೇಲ್‌ನ ಸ್ಮಾರ್ಟ್ ಬಜಾರ್ (Reliance Smart Bazar)ನ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂಬ ಅಂಶ ಇತ್ತೀಚಿನ ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ಫಲಿತಾಂಶದಲ್ಲಿ ಗೋಚರವಾಗಿದೆ. ರಿಲಯನ್ಸ್ ರೀಟೇಲ್ ದಿನಸಿ ಮೂಲಕ ಬರುವ ಆದಾಯ ಪ್ರಮಾಣ ಶೇ. 31ರಷ್ಟು ಹೆಚ್ಚಾಗಿದೆ. ಸ್ಮಾರ್ಟ್- ಸ್ಮಾರ್ಟ್ ಬಜಾರ್‌ನಿಂದ ನಡೆದ ಫುಲ್ ಪೈಸಾ ವಸೂಲ್ ಸೇಲ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 21ರಷ್ಟು ಮಾರಾಟ ಹೆಚ್ಚಾಗಿದೆ. ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಮಾರಾಟ ಬಹಳ ಹೆಚ್ಚಿರುತ್ತದೆ. ಆದರೆ ಹೋಳಿ ಹಬ್ಬದ ಮುಂಚಿನ ಮಾರಾಟವು ದೀಪಾವಳಿ ಸಂದರ್ಭವನ್ನು ಸಹ ಮೀರಿಸಿದೆ.
ಅಂದ ಹಾಗೆ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಈಚೆಗಷ್ಟೇ ಹೊರಬಂದಿದ್ದು, ಕಂಪನಿಯ ರೀಟೇಲ್ ವ್ಯವಹಾರದ ಅಂಗವಾದ ರಿಲಯನ್ಸ್ ರೀಟೇಲ್ ಬೆಳವಣಿಗೆ ಬಗ್ಗೆ ಹೂಡಿಕೆದಾರರಲ್ಲಿ ಹಾಗೂ ಗ್ರಾಹಕರಲ್ಲಿ ಕುತೂಹಲ ಮೂಡಿಸುವಂಥ ಬೆಳವಣಿಗೆಗಳು ಕಂಡುಬಂದಿವೆ. ರಿಲಯನ್ಸ್ ರೀಟೇಲ್ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆದ ಜಿಯೋಮಾರ್ಟ್ ತನ್ನ ಮಾರ್ಕೆಟ್ ಪ್ಲೇಸ್ ಕೊಡುಗೆಗಳನ್ನು ವಿಸ್ತರಿಸಿದ್ದು, ಒಂದು ವರ್ಷದಲ್ಲಿ ಮಾರಾಟಗಾರರ ನೆಲೆ ಶೇ. 94ರಷ್ಟು ಹೆಚ್ಚಾಗಿದೆ.
ದಿನಸಿ ವಿಭಾಗದಲ್ಲಿ ಆರ್ಡರ್ ಮೌಲ್ಯವು ವೃದ್ಧಿಸಿದೆ. ಕ್ಯಾಟಲಾಗ್ (ಲಭ್ಯ ಇರುವ ವಸ್ತುಗಳ ಪಟ್ಟಿ) ವಿಸ್ತರಣೆಯು ಮುಂದುವರಿದಿದ್ದು, ಇ-ಕಾಮರ್ಸ್ ಪ್ಲಾಟ್ ಫಾರ್ಮ್ ತಿಳಿಸಿರುವಂತೆ, ವರ್ಷದಿಂದ ವರ್ಷಕ್ಕೆ ಆಯ್ಕೆಗಳ ಸಂಖ್ಯೆಯಲ್ಲಿ ಶೇ. 32ರಷ್ಟು ಹೆಚ್ಚಾಗಿದೆ. ಸರಾಸರಿ ಆರ್ಡರ್ ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇ. 30ರಷ್ಟು ಹೆಚ್ಚಾಗಿದ್ದು, ಪ್ರತಿ ಆರ್ಡರ್‌ಗೆ ಸರಾಸರಿ ಯೂನಿಟ್ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ. 37ರಷ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್, ದಿನಸಿ, ಫ್ಯಾಷನ್ ಈ ವಿಭಾಗದಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಾಗಿದೆ. ಇನ್ನು ಖರೀದಿ ಆಯ್ಕೆ ಕೂಡ ದೊಡ್ಡ ಪ್ರಮಾಣದಲ್ಲಿ ವೃದ್ಧಿಸಿದೆ ಎನ್ನುವುದು ವಿಶೇಷ.
‘ಹೋಲಿ ರೆಡಿ’ ಹಾಗೂ ‘ರಿಪಬ್ಲಿಕ್ ಡೇ’ ಇಂಥ ಸಂದರ್ಭದಲ್ಲಿ ಗ್ರಾಹಕರು ಹೆಚ್ಚು ಖರೀದಿಸಿದ್ದು, ಸೆಷನ್‌ಗಳು ಕೂಡ ಜಾಸ್ತಿಯಿದೆ ಮತ್ತು ಗ್ರಾಸ್ ಮರ್ಕಂಡೈಸ್ ವ್ಯಾಲ್ಯೂ ಹೆಚ್ಚಿದೆ. ಖರೀದಿ ಅನುಭವವನ್ನು ಉತ್ತಮಗೊಳಿಸುವುದಕ್ಕಾಗಿ ʼಬೈ ಎಗೇಯ್ನ್ʼ ಎಂಬ ಆಯ್ಕೆ ನೀಡಲಾಗಿದ್ದು, ಉತ್ಪನ್ನಗಳಿಗೆ ಗ್ರಾಹಕರು ರೇಟಿಂಗ್ ಸಹ ನೀಡಬಹುದು.
ರಿಲಯನ್ಸ್ ರೀಟೇಲ್ ದಿನಸಿಯ ಹೊಸ ವಾಣಿಜ್ಯ ಸೆಗ್‌ಮೆಂಟ್ ಗಮನಾರ್ಹವಾದ ಬೆಳವಣಿಗೆಯನ್ನು ದಾಖಲಿಸಿದೆ. ಮೆಟ್ರೋ ಕಿರಾಣಾ ಉತ್ಸವದಂಥ ಉಪಕ್ರಮಗಳು ಇದಕ್ಕೆ ಕೊಡುಗೆ ನೀಡಿವೆ. ಹೋಟೆಲ್-ರೆಸ್ಟೋರೆಂಟ್-ಕೆಫೆ ಈ ಸೆಗ್‌ಮೆಂಟ್‌ನಲ್ಲಿ ಮಾಡಿಕೊಂಡ ಸಾಂಸ್ಥಿಕ ಸಹಭಾಗಿತ್ವವು ವೈವಿಧ್ಯಮಯ ಆದಾಯ ಮೂಲದ ಹರಿವಿಗೆ ಕಾರಣವಾಗಿವೆ.
ರಿಲಯನ್ಸ್ ರೀಟೇಲ್ ಫಲಿತಾಂಶ ಘೋಷಣೆ ವೇಳೆ ಕಂಪನಿಯ ಸಿಎಫ್ಒ ದಿನೇಶ್ ತಲುಜಾ ಮಾತನಾಡಿ, ʼʼದೇಶದಲ್ಲಿ ನಾವು ತುಂಬ ಆಳವಾಗಿ ಪ್ರಾದೇಶಿಕವಾದ ಮಳಿಗೆಗಳ ಜಾಲವನ್ನು ಕಟ್ಟುತ್ತಿದ್ದೇವೆʼʼ ಎಂದು ಹೇಳಿದರು. ರೀಟೇಲ್ ವಿಭಾಗದಲ್ಲಿ ರಿಲಯನ್ಸ್ ಗಟ್ಟಿ ಹೆಜ್ಜೆಗಳನ್ನು ಈ ಮಾತುಗಳು ಪ್ರತಿಬಿಂಬಿಸುತ್ತವೆ.
ಇದನ್ನೂ ಓದಿ: Kotak Bank: ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಕೊಟಕ್ ಬ್ಯಾಂಕ್ ಷೇರು ಭಾರಿ ಕುಸಿತ; ಹೂಡಿಕೆದಾರರಿಗೆ ನಷ್ಟ!
ರಿಲಯನ್ಸ್ ರೀಟೇಲ್ ನಾಲ್ಕನೇ ತ್ರೈಮಾಸಿಕದಲ್ಲಿ 2,698 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಇದು ಶೇ 11.7ರಷ್ಟು ಹೆಚ್ಚಾಗಿದೆ. 2020ರಲ್ಲಿ ರಿಲಯನ್ಸ್ ರೀಟೇಲ್‌ನ ಇ-ಟೇಲ್ ಅಂಗವಾಗಿ ಜಿಯೋಮಾರ್ಟ್ ಅಸ್ತಿತ್ವಕ್ಕೆ ಬಂತು. ಇದೀಗ ಭಾರತದ ದೇಶೀಯ ಅತಿದೊಡ್ಡ ಇ-ಮಾರ್ಕೆಟ್ ಪ್ಲೇಸ್‌ಗಳಲ್ಲಿ ಒಂದು ಎನಿಸಿಕೊಂಡಿದೆ.