ಬೆಂಗಳೂರು: ದಿನ ಬಳಕೆಯ ಉತ್ಪನ್ನಗಳ ಮಾರಾಟ ವಲಯದಲ್ಲಿ ದಾಪುಗಾಲಿಡಲು ನಿರ್ಧರಿಸಿರುವ ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಹೆಸರಾಂತ ಬಿಂದು ಜೀರಾ ತಂಪು ಪಾನೀಯ ಬ್ರಾಂಡ್ ಅನ್ನು (Bindu Jeera) ಖರೀದಿಸಲು ಉತ್ಸುಕವಾಗಿದೆ.
ಈ ಸಂಬಂಧ ಪ್ರಸ್ತಾಪವನ್ನು ಕೂಡ ಸಲ್ಲಿಸಿದೆ. ಆದರೆ ರಿಲಯನ್ಸ್ ಪ್ರಸ್ತಾಪವನ್ನು ನಿರಾಕರಿಸಿರುವುದಾಗಿ ಬಿಂದು ಜೀರಾ ಉತ್ಪಾದಕರು ತಿಳಿಸಿದ್ದಾರೆ. “ವಿಸ್ತಾರ ನ್ಯೂಸ್ʼ ಜತೆಗೆ ಈ ಸಂಬಂಧ ಮಾತನಾಡಿದ ಸಮೂಹದ ಮುಖ್ಯಸ್ಥರಾದ ಸತ್ಯ ಶಂಕರ್, ” ರಿಲಯನ್ಸ್ ಇಂಡಸ್ಟ್ರೀಸ್ ಬ್ರಾಂಡ್ ಖರೀದಿಗೆ ಪ್ರಸ್ತಾಪ ಮಾಡಿರುವುದು ನಿಜ. ಆದರೆ ನಮ್ಮ ಕಂಪನಿಯನ್ನು ನಾವೇ ಮತ್ತಷ್ಟು ಬೆಳೆಸಲು ಉದ್ದೇಶಿಸಿದ್ದೇವೆ. ಹೀಗಾಗಿ ರಿಲಯನ್ಸ್ ಇಂಡಸ್ಟೀಸ್‌ಗೆ ಮಾರಾಟ ಮಾಡುವ ಆಲೋಚನೆ ಇಲ್ಲʼʼ ಎಂದು ತಿಳಿಸಿದ್ದಾರೆ.
” ಈ ಹಿಂದೆಯೂ ದೇಶ-ವಿದೇಶಗಳ ಕಂಪನಿಗಳು ನಮ್ಮ ಬ್ರಾಂಡ್ ಅನ್ನು ಖರೀದಿಸಲು ಮುಂದೆ ಬಂದಿದ್ದವು. ಆದರೆ ನಾವು ಒಪ್ಪಿರಲಿಲ್ಲ. ಈಗಲೂ ನಮ್ಮ ನಿಲುವು ಬದಲಾಗಿಲ್ಲ. ನಮ್ಮ ಕಂಪನಿ ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಸ್ತಾರವಾಗಿ ಬೆಳೆಯಲಿದೆ. ಷೇರು ಮಾರುಕಟ್ಟೆಯನ್ನು ಪ್ರವೇಶಿಸಲೂ ಚಿಂತನೆ ನಡೆದಿದೆʼʼ ಎಂದು ತಿಳಿಸಿದರು.
ಪುತ್ತೂರು ಸಮೀಪದ ಬೆಳ್ಳಾರೆಯ ಸತ್ಯ ಶಂಕರ್ ಅವರ ಮಾಲಿಕತ್ವದ ಎಸ್‌ಜಿ ಗ್ರೂಪ್‌ನ ಬ್ರಾಂಡ್‌ಗಳಲ್ಲಿ ಬಿಂದು ಜೀರಾ ದೇಶಾದ್ಯಂತ ಮನೆಮತಾಗಿದೆ. ಬಿಂದು ವಾಟರ್, ಬಿಂದು ಫಿಜ್ ಜೀರಾ ಮಸಾಲಾ, ಬಿಂದು ಲೆಮೆನ್ ಸಮೂಹದ ಪ್ರಚಲಿತ ಬ್ರಾಂಡ್‌ಗಳಾಗಿವೆ. 1987ರಲ್ಲಿ ಆಟೊಮೊಬೈಲ್ ಬಿಡಿಭಾಗಗಳ ಮಾರಾಟದೊಂದಿಗೆ ಉದ್ದಿಮೆ ಆರಂಭಿಸಿದ್ದ ಸತ್ಯ ಶಂಕರ್ ಅವರು ಬಳಿಕ ಪ್ಯಾಕೇಜ್ಡ್ ವಾಟರ್ ಬ್ರಾಂಡ್ ಬಿಂದು ಮಿನರಲ್ ವಾಟರ್ ಕುಡಿಯುವ ನೀರಿನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಯಶಸ್ವಿಯಾದರು. 2002ರಲ್ಲಿ ಸಮೂಹದ ಜನಪ್ರಿಯ ಬಿಂದು ಜೀರಾ ತಂಪು ಪಾನೀಯ ಬಿಡುಗಡೆಯಾಗಿ ಅವರಿಗೆ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿತು.
ರಿಲಯನ್ಸ್ ಇಂಡಸ್ಟ್ರೀಸ್, ಎಸ್‌ಜಿ ಗ್ರೂಪ್‌ನ ಲಹೋರಿ ಜೀರಾ ಮತ್ತು ಬಿಂದು ಬೇವರೀಜಸ್ ಬ್ರಾಂಡ್ ಅನ್ನು ಖರೀದಿಸಲು ಮಾತುಕತೆ ನಡೆಸಿದೆ ಎಂದು ವರದಿಯಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್‌ನ ಇತ್ತೀಚಿನ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ರಿಟೇಲ್‌ನ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ಸಮೂಹವು ಎಫ್‌ಎಂಸಿಜಿ ಬಿಸಿನೆಸ್‌ಗೆ ಪ್ರವೇಶಿಸಲಿದೆ ಎಂದು ಘೋಷಿಸಿದ್ದರು.
ರಿಲಯನ್ಸ್ ಇತ್ತೀಚೆಗೆ ದಿಲ್ಲಿ ಮೂಲದ ಕ್ಯಾಂಪಾ-ಕೋಲಾ ತಂಪು ಪಾನೀಯ ಬ್ರಾಂಡ್ ಅನ್ನು ೨೨ ಕೋಟಿ ರೂ.ಗೆ ಖರೀದಿಸಿತ್ತು. ಜಲನ್ ಫುಡ್ ಪ್ರಾಡಕ್ಟ್ಸ್ ಇದನ್ನು ತಯಾರಿಸುತ್ತಿದೆ.