Site icon Vistara News

Remove misleading ads : ಅಧಿಕ ಸಕ್ಕರೆಯ ವಿವಾದ, ಬೋರ್ನ್‌ವಿಟಾಗೆ ಮಕ್ಕಳ ಹಕ್ಕುಗಳ ಆಯೋಗ ನೀಡಿದ ನೋಟಿಸ್‌ನಲ್ಲಿ ಏನಿದೆ?

Remove misleading ads Controversy of excess sugar in Bournevita notice issued by Child Rights Commission

ನವ ದೆಹಲಿ: ಹೆಲ್ತ್‌ ಡ್ರಿಂಕ್‌ ತಯಾರಕ ಬೋರ್ನ್‌ವಿಟಾದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗಿದೆ ಎಂಬ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗದಿಂದ (NCPCR) ಬೋರ್ನ್‌ವೀಟಾ ತಯಾರಕ ( Bournvita ) ಮೋಂಡೆಲ್ಜ್‌ ಇಂಡಿಯಾ ಇಂಟರ್‌ನ್ಯಾಶನಲ್‌ಗೆ (Mondelez India International) ನೋಟಿಸ್‌ ಜಾರಿಯಾಗಿದೆ. ಈ ಸಂಬಂಧ ಪರಾಮರ್ಶೆ ನಡೆಸಬೇಕು ಹಾಗೂ ದಿಕ್ಕು ತಪ್ಪಿಸುವ ಜಾಹೀರಾತು ಮತ್ತು ಪ್ಯಾಕೇಜಿಂಗ್‌ ಲೇಬಲ್‌ಗಳನ್ನು ಹಿಂತೆಗೆದುಕೊಳ್ಳುವಂತೆ (misleading advertisements) ಎನ್‌ಸಿಪಿಸಿಆರ್‌ ಸೂಚಿಸಿದೆ.

ಮಕ್ಕಳ ಹಕ್ಕುಗಳ ಆಯೋಗವು ಕಂಪನಿಗೆ ನೀಡಿರುವ ನೋಟಿಸ್‌ನಲ್ಲಿ, ನಿಮ್ಮ ಉತ್ಪನ್ನದಲ್ಲಿ ಅಧಿಕ ಸಕ್ಕರೆಯ ಅಂಶ ಇರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದೆ. ಇದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ತಿಳಿಸಿದೆ. ಕಂಪನಿಯ ಅಧ್ಯಕ್ಷ ದೀಪಕ್‌ ಅಯ್ಯರ್‌ಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕುರಿತ ಸಂಸ್ಥೆಯು ಆಹಾರ ವಿಚಾರದಲ್ಲಿ ದಿಕ್ಕು ತಪ್ಪಿಸುವ ಜಾಹೀರಾತು ನೀಡುವ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಎಫ್‌ಎಸ್‌ಎಸ್‌ಎಐಗೆ ಮಕ್ಕಳ ಹಕ್ಕುಗಳ ಆಯೋಗವು ಒತ್ತಾಯಿಸಿದೆ.

ವಿವಾದ ಸೃಷ್ಟಿಯಾಗಿದ್ದು ಹೇಗೆ?

ಸಾಮಾಜಿಕ ಜಾಲತಾಣಗಳಲ್ಲಿನ ಹೆಲ್ತ್‌ ಇನ್‌ಫ್ಲುಯೆನ್ಸರ್‌ ರೇವಂತ್‌ ಹಿಮಾತ್‌ ಸಿಂಗ್‌ ಎಂಬುವರ ವಿಡಿಯೊದಲ್ಲಿ ಬೋರ್ನ್‌ ವಿಟಾವನ್ನು ಟೀಕಿಸಲಾಗಿತ್ತು. ಅದರಲ್ಲಿ ಬೋರ್ನ್‌ವೀಟಾದಲ್ಲಿ ಅಧಿಕ ಸಕ್ಕರೆ, ಕೋಕಾ ಸಾಲಿಡ್‌ ಮತ್ತು ಕ್ಯಾನ್ಸರ್‌ಕಾರಕ ಬಣ್ಣದ ಅಂಶಗಳು ಇದ್ದು, ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗಿತ್ತು. ಕಂಪನಿಯು ಕಾನೂನು ನೋಟಿಸ್‌ ಜಾರಿಗೊಳಿಸಿದ ಬಳಿಕ ಹೆಲ್ತ್‌ ಇನ್‌ಫ್ಲುಯೆನ್ಸರ್‌ ವೀಡಿಯೊವನ್ನು ಹಿಂತೆಗೆದುಕೊಂಡಿದ್ದರು. ಹಾಲಿಗೆ ಬೋರ್ನ್‌ವಿಟಾ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಲಾಗುತ್ತಿದೆ.

ಬೋರ್ನ್‌ವಿಟಾದ ವಕ್ತಾರರು ಈ ಹಿಂದೆ ನೀಡಿದ್ದ ಸ್ಪಷ್ಟೀಕರಣದಲ್ಲಿ, ಪೌಷ್ಟಿಕಾಹಾರ ತಜ್ಞರು ಮತ್ತು ಆಹಾರ ವಿಜ್ಞಾನಿಗಳ ತಂಡದ ಅನುಮೋದನೆಯ ಬಳಿಕವಷ್ಟೇ ಬೋರ್ನ್‌ ವೀಟಾವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದೆ. ವೈಜ್ಞಾನಿಕವಾಗಿ ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದ್ದರು.

ಹೀಗಿದ್ದರೂ ಎನ್‌ ಸಿಪಿಸಿಆರ್‌, ಬೋರ್ನ್‌ವಿಟಾವು ಎಫ್‌ಎಸ್‌ಎಸ್‌ಎಐ ಮಾರ್ಗದರ್ಶಕ ನಿಯಮಗಳ ಅನ್ವಯ ಡಿಸ್‌ಪ್ಲೇಗಳನ್ನು ಸರಿಯಾಗಿ ಮಾಡಿಲ್ಲ ಎಂದು ಕಂಪನಿಗೆ ನೋಟಿಸ್‌ ನೀಡಿತ್ತು.

Exit mobile version