ನವ ದೆಹಲಿ: ಎರಡು ತಿಂಗಳಿನ ಇಳಿಕೆಯ ಬಳಿಕ ಭಾರತದ ಚಿಲ್ಲರೆ ಹಣದುಬ್ಬರ (Retail Inflation) ಜನವರಿಯಲ್ಲಿ 6.52%ಕ್ಕೆ ಏರಿಕೆಯಾಗಿದೆ. ಅಂಕಿ ಅಂಶಗಳ ಸಚಿವಾಲಯ ಸೋಮವಾರ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಏರುಗತಿಯಲ್ಲಿತ್ತು. ಕಳೆದ ವರ್ಷದ ಪ್ರತಿಕೂಲಾತ್ಮಕ ಬೇಸ್ ಎಫೆಕ್ಟ್ ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಿದ್ದರೂ ಕಳೆದ ವರ್ಷ ಡಿಸೆಂಬರ್‌ಗೆ ಹೋಲಿಸಿದರೆ (5.72%) ಗಣನೀಯ ಏರಿಕೆಯಾಗಿದೆ.
ಆಹಾರ ದರದಲ್ಲಿ ಏರಿಕೆಯಾಗಿರುವುದು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಯಿತು. ಗ್ರಾಹಕ ದರ ಸೂಚ್ಯಂಕದಲ್ಲಿ (consumer price index) 40% ಪಾಲನ್ನು ಆಹಾರ ಹಣದುಬ್ಬರ ಹೊಂದಿದೆ. ಆರ್‌ಬಿಐ ಪ್ರಕಾರ ಹಣದುಬ್ಬರ 2%-6% ಶ್ರೇಣಿಯಲ್ಲಿ ಇರಬೇಕು. ಕಳೆದ ವಾರ ಆರ್‌ಬಿಐ ರೆಪೊ ದರವನ್ನು ಏರಿಸಿತ್ತು.
ತರಕಾರಿಗಳ ಹಣದುಬ್ಬರ ಜನವರಿಯಲ್ಲಿ 11.70%ಕ್ಕೆ ತಗ್ಗಿದೆ. ಡಿಸೆಂಬರ್‌ನಲ್ಲಿ ಇದು 15.08% ಇತ್ತು. ಇಂಧನ ಹಣದುಬ್ಬರ 10.84% ಇತ್ತು. ಡಿಸೆಂಬರ್‌ನಲ್ಲಿ ಇದು 10.97% ಇತ್ತು. ವಿಶ್ವಾದ್ಯಂತ ಸೆಂಟ್ರಲ್ ಬ್ಯಾಂಕ್‌ಗಳಿಗೆ ಅಧಿಕ ಹಣದುಬ್ಬರದ ಸವಾಲು ಕಾಡುತ್ತಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಅನಿಶ್ಚಿತತೆ ಕಾಡುತ್ತಿದೆ. ಪೂರೈಕೆಯ ಕಡೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಆಘಾತದ ಬಳಿಕ ಆರ್ಥಿಕತೆ ಕ್ರಮೇಣ ಚೇತರಿಸುತ್ತಿದೆ. ಆರ್‌ಬಿಐ ಕಳೆದ ವರ್ಷ ಮೇ ಬಳಿಕ ಅಲ್ಪಾವಧಿಯ ಸಾಲಗಳ ಬಡ್ಡಿ ದರದಲ್ಲಿ 2.25% ಏರಿಕೆ ಮಾಡಿದೆ.