ನವ ದೆಹಲಿ: ಗ್ರಾಹಕ ದರ ಆಧರಿತ ಚಿಲ್ಲರೆ ಹಣದುಬ್ಬರದ ಪ್ರಮಾಣ ಕಳೆದ ಮಾರ್ಚ್‌ನಲ್ಲಿ 5.99%ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ದೀರ್ಘಕಾಲದ ಬಳಿಕ ಆರ್‌ಬಿಐನ ಸುರಕ್ಷತಾ ಮಟ್ಟದ ವ್ಯಾಪ್ತಿಗೆ ಇಳಿದಿದೆ. ಫೆಬ್ರವರಿಯಲ್ಲಿ ಇದು 6.44%ರಷ್ಟಿತ್ತು. (Retail inflation) ತರಕಾರಿಗಳ ದರದಲ್ಲಿ ಇಳಿಕೆಯಾಗಿರುವುದು ಇದಕ್ಕೆ ಕಾರಣ ಎಂದು ಅಂಕಿ ಅಂಶಗಳು ತಿಳಿಸಿವೆ.
ಮಾರ್ಚ್‌ನಲ್ಲಿ ಆಹಾರ ದರ ಸೂಚ್ಯಂಕ ( consumer food price index ) 4.79%ಕ್ಕೆ ತಗ್ಗಿದೆ. ಕಳೆದ ಫೆಬ್ರವರಿಯಲ್ಲಿ 5.95%ರಷ್ಟಿತ್ತು. ಗ್ರಾಮೀಣ ಹಣದುಬ್ಬರ 5.51% ಹಾಗೂ ನಗರ ಹಣದುಬ್ಬರ 5.89%ರಷ್ಟಿತ್ತು.
ಭಾರತದಲ್ಲಿ ರಿಟೇಲ್ ಹಣದುಬ್ಬರ ಇಳಿಕೆಯ ಹಂತದಲ್ಲಿದ್ದರೂ, ಕಳೆದ ಹಲವಾರು ತಿಂಗಳುಗಳಿಂದಲೂ, ಆರ್‌ಬಿಐನ 6% ಸುರಕ್ಷತಾ ಮಟ್ಟಕ್ಕಿಂತ ಮೇಲಿತ್ತು. 2023ರ ಫೆಬ್ರವರಿಯಲ್ಲಿ ರಿಟೇಲ್ ಹಣದುಬ್ಬರ 6.44% ಇತ್ತು. ಜನವರಿಯಲ್ಲಿ 6.52% ಇತ್ತು. ಹಣದುಬ್ಬರವನ್ನು ಹತ್ತಿಕ್ಕುವ ದೃಷ್ಟಿಯಿಂದ ಆರ್‌ಬಿಐ 2022ರ ಮೇ ಬಳಿಕ ಇಲ್ಲಿಯವರೆಗೆ ರೆಪೊ ದರದಲ್ಲಿ 2.50% ಏರಿಕೆ ಮಾಡಿದೆ.
ದೇಶದಲ್ಲಿ ಚಿಲ್ಲರೆ ಹಣದುಬ್ಬರ ಉನ್ನತ ಮಟ್ಟದಲ್ಲಿ ಮುಂದುವರಿದಿರುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಮಾಸಿಕ ಬುಲೆಟಿನ್‌ನಲ್ಲಿ ಕಳವಳ ವ್ಯಕ್ತಪಡಿಸಿತ್ತು. ( Retail inflation) ರಿಟೇಲ್ ಹಣದುಬ್ಬರ 2023ರ ಜನವರಿಯಲ್ಲಿ 6.52% ಮತ್ತು ಫೆಬ್ರವರಿಯಲ್ಲಿ 6.44% ರಷ್ಟಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 8% ಅಧಿಕ ಹಣದುಬ್ಬರ ಇತ್ತು. ಛತ್ತೀಸ್‌ಗಢ, ದಿಲ್ಲಿ, ಗೋವಾ, ಹಿಮಾಚಲಪ್ರದೇಶ, ಮಣಿಪುರದಲ್ಲಿ 4% ಕ್ಕಿಂತ ಕಡಿಮೆ ಹಣದುಬ್ಬರ ಇತ್ತು ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ.
ಭಾರತ ಪ್ರಗತಿಪರ ಮಾರುಕಟ್ಟೆಯಾಗಿದ್ದು, ವಿತ್ತೀಯ ಕೊರತೆ ( current account deficit) ಇದೆ. ಉಳಿತಾಯದ ಪ್ರಮಾಣ ಇಳಿಕೆಯಾಗಿದ್ದರೂ, ವಿದೇಶಿ ಸಂಪನ್ಮೂಲದ ಪೂರೈಕೆಯಿಂದ ಭರಿಸಲಾಗುತ್ತಿದೆ. ಹೀಗಾಗಿ ಉದ್ದೇಶಿತ ಹೂಡಿಕೆ ಸಾಧ್ಯವಾಗುತ್ತಿದೆ ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ.
ಜಗತ್ತಿನ ಹಲವಾರು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. ಜಾಗತಿಕ ಆರ್ಥಿಕತೆ 2023ರಲ್ಲಿ ಆರ್ಥಿಕ ಹಿಂಜರಿತದ ಭೀತಿಯಲ್ಲಿದ್ದರೂ, ಭಾರತವು ಕೋವಿಡ್ ಬಿಕ್ಕಟ್ಟಿನ ಬಳಿಕ ಆರ್ಥಿಕವಾಗಿಯೂ ಚೇತರಿಸಿಕೊಂಡಿದೆ ಎಂದು ಆರ್‌ಬಿಐ ತಿಳಿಸಿದೆ.
ಕಾರ್ಖಾನೆಗಳಲ್ಲಿ ಉತ್ಪಾದನೆ ಚುರುಕು: ಕಳೆದ ಫೆಬ್ರವರಿಯಲ್ಲಿ ದೇಶದ ಕಾರ್ಖಾನೆಗಳಲ್ಲಿನ ಉತ್ಪಾದನೆ 5.6% ಪ್ರಗತಿ ದಾಖಲಿಸಿದೆ ಎಂದು ಅಂಕಿ ಅಂಶಗಳು ತಿಳಿಸಿದೆ. ಜನವರಿಯಲ್ಲಿ ಇದು 5.5% ಇತ್ತು.