ನವ ದೆಹಲಿ: ಭಾರತ ಅಕ್ಕಿಯ ರಫ್ತಿನ ಮೇಲೆ (Rice export) ನಿರ್ಬಂಧಗಳನ್ನು ವಿಧಿಸಿದೆ. ಕಡಿ ಅಕ್ಕಿ ರಫ್ತಿಗೆ (broken rice) ನಿಷೇಧ ವಿಧಿಸಲಾಗಿದೆ. ಬಾಸ್ಮತಿಯೇತರ ಅಕ್ಕಿಗೆ 20% ಸುಂಕ ವಿಧಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಭತ್ತದ ಬಿತ್ತನೆ ಪ್ರದೇಶ ಕುಂಠಿತವಾಗಿರುವುದರಿಂದ ಅಕ್ಕಿಯ ಉತ್ಪಾದನೆ ಮತ್ತು ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಕೆಲವು ರಫ್ತುದಾರರಿಗೆ ಸೆಪ್ಟೆಂಬರ್ 15ರ ತನಕ ರಫ್ತಿಗೆ ಅವಕಾಶ ನೀಡಲಾಗಿದೆ.
ಅಕ್ಕಿ ರಫ್ತು ನಿರ್ಬಂಧಕ್ಕೆ ಕಾರಣವೇನು? : ” ಈ ಸಲ ಭತ್ತದ ಬಿತ್ತನೆ ಪ್ರದೇಶದಲ್ಲಿ ಇಳಿಕೆಯಾಗಿದೆ. ಅತಿ ವೃಷ್ಟಿಯಿಂದಲೂ ಅಪಾರ ಬೆಳೆಹಾನಿ ಸಂಭವಿಸಿದೆ. ಜತೆಗೆ ಕಳೆದ ಕೆಲ ತಿಂಗಳುಗಳಿಂದ ಮಾರುಕಟ್ಟೆಯಲ್ಲಿ ಅಕ್ಕಿಯ ದರದಲ್ಲಿ 15-20% ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಸಗಟು ಆಹಾರ ಧಾನ್ಯ ಮತ್ತು ಬೇಳೆಕಾಳು ವರ್ತಕರ ಸಂಘಟನೆಯ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ತಿಳಿಸಿದ್ದಾರೆ.
ಪ್ರಸಕ್ತ ಮುಂಗಾರು ಸೀಸನ್‌ನಲ್ಲಿ 383 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯ ಬಿತ್ತನೆ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 5.62% ಇಳಿಕೆಯಾಗಿದೆ. ಚೀನಾ ಹೊರತುಪಡಿಸಿದರೆ ಎರಡನೇ ಅತಿ ದೊಡ್ಡ ಅಕ್ಕಿ ಉತ್ಪಾದಕ ಭಾರತವಾಗಿದೆ. 2021-22ರಲ್ಲಿ ಭಾರತ ೨.೧೨ ಕೋಟಿ ಟನ್ ಅಕ್ಕಿ ರಫ್ತು ಮಾಡಿತ್ತು. ಇದರಲ್ಲಿ 39 ಲಕ್ಷ ಟನ್ ಬಾಸ್ಮತಿಯೇತರ ಅಕ್ಕಿಯಾಗಿತ್ತು. ಭಾರತವು ನೈಜೀರಿಯಾ, ಬೆನಿನ್, ಕ್ಯಾಮರೂನ್‌ಗೆ ಅಗ್ಗದ ದರದಲ್ಲಿ ಅಕ್ಕಿ ರಫ್ತು ಮಾಡುತ್ತಿದೆ. ಒಟ್ಟು 150 ದೇಶಗಳಿಗೆ ಬಾಸ್ಮತಿಯೇತರ ಅಕ್ಕಿಯನ್ನು 2021-22ರಲ್ಲಿ ಭಾರತ ರಫ್ತು ಮಾಡಿತ್ತು.
20% ಸುಂಕದ ಪರಿಣಾಮ ಅಕ್ಕಿಯ ರಫ್ತು ಕಡಿಮೆಯಾಗಲಿದೆ. ದೇಶಿ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆಗೆ ಕೊರತೆಯಾಗದಂತೆ ನೋಡಿಕೊಳ್ಳಲು ಈ ಕ್ರಮ ಅವಶ್ಯಕ ಎಂದು ತಜ್ಞರು ತಿಳಿಸಿದ್ದಾರೆ. ಚೀನಾ ಕಡಿ ಅಕ್ಕಿಯ ಅತಿ ದೊಡ್ಡ ಖರೀದಿದಾರ ರಾಷ್ಟ್ರವಾಗಿದೆ.
ಗೋಧಿಯ ರಫ್ತಿಗೆ ನಿಷೇಧ ವಿಧಿಸಿದ ಬಳಿಕ ಅಕ್ಕಿ ರಫ್ತಿಗೆ ನಿರ್ಬಂಧ ಹೇರಿದಂತಾಗಿದೆ. ಭಾರತದಲ್ಲೂ ಕನಿಷ್ಠ ಬೆಂಬಲ ಬೆಲೆಗಿಂತ ಮಾರುಕಟ್ಟೆ ದರ ಹೆಚ್ಚಿದೆ. ಬಾಸ್ಮತಿಯೇತರ ಅಕ್ಕಿಯ ರಫ್ತಿಗೆ 20% ಸುಂಕ ಹೇರಿಕೆಯ ಪರಿಣಾಮ ಖರೀದಿದಾರರು ಭಾರತದ ಮೂಲದ ಅಕ್ಕಿಯನ್ನು ಖರೀದಿಸಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಆಗ ರಫ್ತು ಇಳಿಯುತ್ತದೆ. ಭಾರತದಲ್ಲಿ ಧಾನ್ಯಪೂರೈಕೆಗೆ ಅನುಕೂಲವಾಗಲಿದೆ.
ಇದನ್ನೂ ಓದಿ | Price rise | ಮಾರುಕಟ್ಟೆಯಲ್ಲಿ ಗೋಧಿಯ ಬಳಿಕ ಅಕ್ಕಿಯ ದರ 6.31% ಏರಿಕೆ