ಬೆಂಗಳೂರು: ಅಕ್ಕಿಯ ದರದಲ್ಲಿ ಇತ್ತೀಚೆಗೆ ಪ್ರತಿ ಕೆ.ಜಿಗೆ 8-10 ರೂ. ಏರಿಕೆಯಾಗಿದೆ. ಅತಿ ವೃಷ್ಠಿಯಿಂದಾಗಿ ಉಂಟಾಗಿರುವ ಬೆಳೆ ಹಾನಿ, ಬಾಂಗ್ಲಾದೇಶಕ್ಕೆ ಅಕ್ಕಿ ರಫ್ತು ಮುಂತಾದ ಕಾರಣಗಳಿಂದ ದರ ಏರಿಕೆ ಉಂಟಾಗಿದೆ ಎಂದು (Rice price rise ) ತಜ್ಞರು ತಿಳಿಸಿದ್ದಾರೆ.
ಮಳೆಗಾಲದ ಅತಿವೃಷ್ಟಿಯ ಪರಿಣಾಮ ಭತ್ತದ ಇಳುವರಿ ಕುಸಿದಿದೆ. ಮತ್ತೊಂದು ಕಡೆ ಜೂನ್ 22 ರಂದು, ಬಾಂಗ್ಲಾದೇಶವು ಅಕ್ಟೋಬರ್ 31 ರವರೆಗೆ ಬಾಸ್ಮತಿಯೇತರ ಅಕ್ಕಿಯನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಹಿಂದೆ ಭಾರತವು ಗೋಧಿ ರಫ್ತನ್ನು ನಿಷೇಧಿಸಿದಂತೆ ಅಕ್ಕಿ ರಫ್ತಿನ ಮೇಲೆ ಕೂಡ ನಿಷೇದ ವಿಧಿಸಬಹುದೆಂಬ ಆತಂಕದಿಂದ ಬಾಂಗ್ಲಾದೇಶವು ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ.
ಬಾಂಗ್ಲಾದೇಶವು ಆಮದು ಸುಂಕ ಮತ್ತು ಅಕ್ಕಿಯ ಮೇಲಿನ ಸುಂಕಗಳನ್ನು 62.5% ರಿಂದ 25%ಕ್ಕೆ ಇಳಿಸಿದ ನಂತರ ಕಳೆದ ಐದು ದಿನಗಳಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಕ್ಕಿಯ ಬೆಲೆಗಳು ಶೇಕಡಾ 15 ರಷ್ಟು ಏರಿಕೆಯಾಗಿದೆ, ಇದು ಭಾರತೀಯ ವ್ಯಾಪಾರಿಗಳನ್ನು ರಫ್ತು ಮಾಡಲು ಉತ್ತೇಜಿಸಿದೆ.
ಬಾಂಗ್ಲಾದೇಶವು ಸಾಮಾನ್ಯವಾಗಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಬಿಹಾರದಿಂದ ಅಕ್ಕಿಯನ್ನು ಖರೀದಿಸುತ್ತದೆ. 2021-22ರ ಸಾಲಿನಲ್ಲಿ 13.59 ಲಕ್ಷ ಟನ್ ಅಕ್ಕಿಯನ್ನು ಆಮದು ಮಾಡಿಕೊಂಡಿದೆ. ಈ ಮೂರು ರಾಜ್ಯಗಳಲ್ಲಿನ ಬೆಲೆ ಏರಿಕೆಯು ಇತರ ಪ್ರದೇಶಗಳಲ್ಲಿ ಅಕ್ಕಿಯ ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಕೇಂದ್ರ ಸರಕಾರ ಅಕ್ಕಿಯ ದರ ಏರಿಕೆಯನ್ನು ತಡೆಯಲು ಪ್ರಸ್ತುತ ಶೇ. 20 ರಫ್ತು ಸುಂಕ ಹೇರಿದೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಆಕ್ಕಿಯ ಬೆಲೆ ಸ್ಥಿರವಾಗಲಿದೆ ಎಂದು ಹೇಳುತ್ತಾರೆ. ಬೆಂಗಳೂರು ಎಪಿಎಂಸಿ ಅಕ್ಕಿ ವ್ಯಾಪಾರಿ ಗೋಪಿ.
ಭತ್ತದ ಬೆಳೆ ನಾಶ: ಮಾರ್ಚ್-ಏಪ್ರಿಲ್‍ನಲ್ಲಿ ಬಂದ ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭತ್ತದ ಬೆಳೆ ನಾಶವಾಯಿತು. ಹೀಗಾಗಿ, ಕರ್ನಾಟಕದಿಂದ ಭತ್ತ ಖರೀದಿಸಲು ಮುಂದಾಗಿವೆ. ಜತೆಗೆ ರಫ್ತು ಬೇಡಿಕೆ ಹೆಚ್ಚಾದ ಪರಿಣಾಮ ಅಕ್ಕಿಯ ಬೆಲೆ ಏರಿಕೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿನ ಅಕ್ಕಿ ವ್ಯಾಪಾರಿ ವಿಠಲ್ ಭವಾನಿ ಎಂಟರ್‌ಪ್ರೈಸಸ್‌ನ ವಿಠಲ್ ಅವರು ಹೇಳುವಂತೆ, “ಮಾರ್ಚ್‍ನಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ದಾವಣಗೆರೆ ಹಾಗೂ ಇತರೆಡೆ ಭತ್ತದ ಬೆಳೆ ಶೇ. 25 ಹಾನಿಗೀಡಾಯಿತು. ಹೀಗಾಗಿ, 75 ಕೆ.ಜಿ. ಭತ್ತದ ಚೀಲಕ್ಕೆ 1,300 ರೂ. ಇದ್ದುದು, ಇದೀಗ 1,500 ರೂ.ಗೆ ಏರಿಕೆಯಾಗಿದೆ. ಅಂದರೆ ಸುಮಾರು 350 ರೂ.ವರೆಗೆ ಹೆಚ್ಚಾಯಿತು. ಮಿಲ್‍ಗಳಿಂದ ಅದು ಗ್ರಾಹಕರ ಕೈ ಸೇರುವ ಹೊತ್ತಿಗೆ ಮತ್ತಷ್ಟು ದರ ಹೆಚ್ಚುತ್ತದೆ.
ಅಕ್ಕಿ ಬೆಲೆ ಏರಿಕೆ, ಯಾವುದಕ್ಕೆ ಎಷ್ಟು?
ಅಕ್ಕಿಯ ವಿಧ | ಹಳೆಯ ದರ (ರೂ.ಗಳಲ್ಲಿ) | ಪರಿಷ್ಕೃತ ದರ |
2 ವರ್ಷ ಹಳೆಯ ರಾ ರೈಸ್ ಅಕ್ಕಿ, ಸೋನಾ ಮಸೂರಿ | 46-48 (ಕೆ.ಜಿಗೆ, ಸಗಟು ದರ) | 54-55 ರೂ. |
ಹಳೆಯ ಸೋನಾ ಮಸೂರಿ ಸ್ಟೀಮ್ | 32-36 | 46-50 |
ಐಆರ್ 8 ಮತ್ತು ಇಡ್ಲಿಕಾರ್ ಅಕ್ಕಿ | 28-30 | 32-36 |
ಸೋನಾ ಮಸೂರಿ ಹಳೆ ಅಕ್ಕಿ | 50-52 | 60-64 |