ಕ್ಯಾಲಿಫೋರ್ನಿಯಾ: ಬ್ರಿಟಿಷ್ ಉದ್ಯಮಿ ರಿಚರ್ಡ್ ಬ್ರಾನ್ಸನ್ (Richard Branson) ಅವರ ವರ್ಜಿನ್ ಆರ್ಬಿಟ್ (Virgin Orbit) ಎಂಬ ಕಂಪನಿ ದಿವಾಳಿಯಾಗಿದೆ. ಇದು ಕ್ಯಾಲಿಫೋರ್ನಿಯಾದಲ್ಲಿ 2017ರಲ್ಲಿ ಸ್ಥಾಪನೆಯಾಗಿದ್ದು, ಸಣ್ಣ ಉಪಗ್ರಹಗಳನ್ನು ಉಡಾವಣೆಗೊಳಿಸಲು ರಾಕೆಟ್ ಲಾಂಚರ್ ಸೇವೆಯನ್ನು ಒದಗಿಸುತ್ತದೆ. ಕಂಪನಿಯು ಅಮೆರಿಕದಲ್ಲಿ ದಿವಾಳಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದೆ.
ವರ್ಜಿನ್ ಆರ್ಬಿಟ್ ತನ್ನ 750 ಸಿಬ್ಬಂದಿಯ ಪೈಕಿ 85% ಮಂದಿಯನ್ನು ಕಳೆದ ವಾರ ವಜಾಗೊಳಿಸಿತ್ತು. ಇತ್ತೀಚೆಗೆ ವರ್ಜಿನ್ ಆರ್ಬಿಟ್ ಬ್ರಿಟನ್‌ನ ನೆಲದಲ್ಲಿ ಮೊದಲ ಉಪಗ್ರಹ ಉಡಾವಣೆ ಮಾಡುವಲ್ಲಿ ವಿಫಲವಾಗಿತ್ತು.
ವರ್ಜಿನ್ ಆರ್ಬಿಟ್ ತನ್ನ ಹಣಕಾಸು ಅಗತ್ಯ ಮತ್ತು ಭವಿಷ್ಯದ ಯೋಜನೆಗಳ ಸಮರ್ಪಕ ಅನುಷ್ಠಾನ, ಗ್ರಾಹಕರು ಹಾಗೂ ಉದ್ಯೋಗಿಗಳ ಹಿತ ದೃಷ್ಟಿಯಿಂದ ದಿವಾಳಿ ಪ್ರಕ್ರಿಯೆಗೆ ಮುಂದಾಗಿದೆ ಎಂದು ಕಂಪನಿಯ ಮುಖ್ಯಸ್ಥ ಡಾನ್ ಹರ್ಟ್ ತಿಳಿಸಿದ್ದಾರೆ. ವರ್ಜಿನ್ ಆರ್ಬಿಟ್, ಅತ್ಯಾಧುನಿಕ ಬೋಯಿಂಗ್ 747ರ ನೆರವಿನಲ್ಲಿ ಉಪಗ್ರಹಗಳನ್ನು ಹೊತ್ತ ರಾಕೆಟ್‌ಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸುತ್ತದೆ.
ಕಳೆದ ನವೆಂಬರ್ ಮತ್ತು ಮಾರ್ಚ್ ನಡುವೆ ವರ್ಜಿನ್ ಗ್ರೂಪ್, ವರ್ಜಿನ್ ಆರ್ಬಿಟ್‌ಗೆ 50 ದಶಲಕ್ಷ ಡಾಲರ್ (410 ಕೋಟಿ ರೂ.) ಫಂಡ್ ಅನ್ನು ನೀಡಿತ್ತು. ರಿಚರ್ಡ್ ಬ್ರಾನ್ಸನ್ 1970ರಲ್ಲಿ ವರ್ಜಿನ್ ಗ್ರೂಪ್ ಅನ್ನು ಸ್ಥಾಪಿಸಿದ್ದು, ನಾನಾ ಉದ್ದಿಮೆಗಳಲ್ಲಿ 400ಕ್ಕೂ ಹೆಚ್ಚು ಕಂಪನಿಗಳನ್ನು ನಡೆಸುತ್ತಿದೆ.