ನವ ದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕಳೆದ ಜುಲೈ-ಸೆಪ್ಟೆಂಬರ್ ಅವಧಿಯ ನಿವ್ವಳ ಆದಾಯದಲ್ಲಿ (Net income) ರಿಲಯನ್ಸ್ ಇಂಡಸ್ಟ್ರೀಸ್ ಅನ್ನೂ ಹಿಂದಿಕ್ಕಿದೆ.
ಎಸ್‌ಬಿಐ ಈ ತ್ರೈಮಾಸಿಕದಲ್ಲಿ 14,752 ಕೋಟಿ ರೂ. ನಿವ್ವಳ ಆದಾಯ ಗಳಿಸಿದೆ. ಬ್ಯಾಂಕ್ 13,265 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಎಸ್‌ಬಿಐನ ಇತಿಹಾಸದಲ್ಲೇ ತ್ರೈಮಾಸಿಕವೊಂದರ ಇದುವರೆಗಿನ ಗರಿಷ್ಠ ನಿವ್ವಳ ಆದಾಯ ಇದಾಗಿದೆ. ಎಸ್‌ಬಿಐ ಸಮೂಹದ ಒಟ್ಟು ಆದಾಯ 1,14,782 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 1,01,143 ಕೋಟಿ ರೂ.ನಷ್ಟಿತ್ತು.
ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ 13,656 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ರಿಲಯನ್ಸ್ ಇಂಡಸ್ಟ್ರಿಯ ರಫ್ತಿನ ಮೇಲೆ 4,039 ಕೋಟಿ ರೂ. ವಿಂಡ್ ಫಾಲ್ ಟ್ಯಾಕ್ಸ್ ಪರಿಣಾಮ ನಿವ್ವಳ ಆದಾಯ ಇಳಿಕೆಯಾಗಿತ್ತು.
ರಿಲಯನ್ಸ್ ಇಂಡಸ್ಟ್ರೀಸ್‌ನ ನಿವ್ವಳ ಆದಾಯದಲ್ಲಿ 4,729 ಕೋಟಿ ರೂ. ಜಿಯೊ ಕಂಪನಿಯಿಂದ ಲಭಿಸಿದೆ. 4,404 ಕೋಟಿ ರೂ. ರಿಟೇಲ್ ಬಿಸಿನೆಸ್ ಮೂಲಕ ಸಿಕ್ಕಿದೆ. ಕಳೆದ ವರ್ಷ ಇವೆರಡೂ ಕಂಪನಿಗಳಿಂದ 13,680 ಕೋಟಿ ರೂ. ನಿವ್ವಳ ಆದಾಯ ಉಂಟಾಗಿತ್ತು.